ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯಗೆ ಕೊರೊನಾ ಕಾಣಿಸಿಕೊಂಡಿರುವುದು ಶ್ರೀಲಂಕಾ ಪ್ರವಾಸಕ್ಕೆ ಮಾತ್ರವಲ್ಲ ಇಂಗ್ಲೆಂಡ್ ಪ್ರವಾಸದ ಮೇಲೂ ಹೊಡೆತ ನೀಡಿದೆ. ಕೊರೊನಾ ಹಿನ್ನಲೆಯಲ್ಲಿ 9 ಆಟಗಾರರು ತಂಡದಿಂದ ಹೊರ ಬಿದ್ದಿದ್ದಾರೆ. ಇದ್ರಿಂದ ಶ್ರೀಲಂಕಾ ವಿರುದ್ಧ ಟಿ-20 ಎರಡನೇ ಪಂದ್ಯದಲ್ಲಿ ಭಾರತ ಸೋಲಬೇಕಾಯ್ತು.
ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭದ ಮೊದಲು, ಶುಬ್ಮನ್ ಗಿಲ್, ಅವೇಶ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್ ಗಾಯಗೊಂಡು ಪ್ರವಾಸದಿಂದ ಹೊರಗುಳಿದಿದ್ದಾರೆ. ಹಾಗಾಗಿ ಸೂರ್ಯಕುಮಾರ್ ಯಾದವ್ ಗೆ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಬ್ಯಾಟ್ಸ್ ಮನ್ ಪೃಥ್ವಿ ಶಾ ಅವರೊಂದಿಗೆ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಆದ್ರೆ ಇವರಿಬ್ಬರ ಇಂಗ್ಲೆಂಡ್ ಪ್ರವಾಸದ ಬಗ್ಗೆ ಪ್ರಶ್ನೆ ಎದ್ದಿದೆ. ಇಬ್ಬರೂ, ಕೃನಾಲ್ ಪಾಂಡ್ಯ ನಿಕಟ ಸಂಪರ್ಕದಲ್ಲಿದ್ದರು. ಹಾಗಾಗಿ ಇಂಗ್ಲೆಂಡ್ ಪ್ರವಾಸದ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ಶೀಘ್ರದಲ್ಲೇ ಬಿಸಿಸಿಐ, ಸೂರ್ಯಕುಮಾರ್ ಮತ್ತು ಪೃಥ್ವಿ ಶಾ ಆಯ್ಕೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.
ಕೃನಾಲ್ ಪಾಂಡ್ಯ ಕೊರೊನಾ ವರದಿ ಪಾಸಿಟಿವ್ ಬಂದ್ಮೇಲೆ ಅವರ ಸಂಪರ್ಕಕ್ಕೆ ಬಂದ ಆಟಗಾರರನ್ನು ಪ್ರತ್ಯೇಕವಾಗಿಡಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಕೂಡ ಪ್ರತ್ಯೇಕವಾಗಿದ್ದಾರೆ. 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗಿದೆ. ಇಬ್ಬರು ಆಟಗಾರರು ಆಗಸ್ಟ್ 2 ರವರೆಗೆ ಕ್ವಾರಂಟೈನ್ ನಲ್ಲಿರಬೇಕು. ಹಾಗಾಗಿ ಇಂಗ್ಲೆಂಡ್ ಗೆ ತೆರಳುವುದು ಅನುಮಾನ. 7 ದಿನಗಳ ನಂತ್ರವೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಕಷ್ಟವಾಗಲಿದೆ. ಇಂಗ್ಲೆಂಡ್‌ನಲ್ಲಿ ಕಟ್ಟುನಿಟ್ಟಿನ ನಿಯಮವಿದೆ. ಯಾವುದೇ ವ್ಯಕ್ತಿ, ಕೋವಿಡ್ -19 ಪಾಸಿಟಿವ್ ಬಂದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ, 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕು. ಅಂದ್ರೆ ಆಗಸ್ಟ್ 5ರವರೆಗೆ ಕ್ವಾರಂಟೈನ್ ನಲ್ಲಿರಬೇಕು. ಇದರ ನಂತ್ರ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್, ಯುಕೆಯಲ್ಲಿ 10 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ.
ಯುಕೆ ನಲ್ಲಿ 10 ದಿನಗಳ ಕ್ಯಾರೆಂಟೈನ್ ನಂತರ, ಸೂರ್ಯಕುಮಾರ್ ಮತ್ತು ಪೃಥ್ವಿ ಶಾ, 3 ದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕು. 3 ಬಾರಿ ಕೋವಿಡ್ -19 ಪರೀಕ್ಷೆ ನಡೆಯಲಿದೆ. ಹಾಗಾಗಿ ಇವರಿಬ್ಬರ ಬದಲಿಗೆ ಬಿಸಿಸಿಐ ಬೇರೆ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗಲಿದೆ.