ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ಭಾರತದ ಮೇಲೆ ನಿರೀಕ್ಷೆ ಹೆಚ್ಚಿದೆ. ಆದ್ರೆ ಮೂರನೇ ಟೆಸ್ಟ್ ಪಂದ್ಯದ ಆರಂಭದಲ್ಲಿಯೇ ಟೀಂ ಇಂಡಿಯಾ ನಿರಾಸೆ ಮೂಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿರಾಟ್ ಪಡೆ, ಪೆವಿಲಿಯನ್ ಪರೆಡ್ ನಡೆಸಿದೆ.
ಕೆ.ಎಲ್. ರಾಹುಲ್ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದರೆ, ಚೇತೇಶ್ವರ ಪೂಜಾರ 1 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಮತ್ತೊಮ್ಮೆ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ಕೇವಲ 7 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಟೀಂ ಇಂಡಿಯಾ 26 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು.
ಟೀಮ್ ಇಂಡಿಯಾದ ಹಿರಿಯ ಆಟಗಾರ ಚೇತೇಶ್ವರ ಪೂಜಾರ ದೀರ್ಘಕಾಲದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅವರನ್ನು ತಂಡದಿಂದ ಹೊರಗಿಡುವಂತೆ ಸಾಕಷ್ಟು ಮಾತುಗಳು ಕೇಳಿ ಬಂದಿತ್ತು. ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ 45 ರನ್ ಗಳಿಸುವ ಮೂಲಕ ಪೂಜಾರ ಮತ್ತೆ ಭರವಸೆ ನೀಡಿದ್ದರು. ಆದ್ರೆ ಮೂರನೇ ಟೆಸ್ಟ್ ನಲ್ಲಿ ಮತ್ತೆ ನಿರಾಸೆಗೊಳಿಸಿದ್ದಾರೆ. ಇದು ಪೂಜಾರ್ ಕೊನೆ ಟೆಸ್ಟ್ ಆಗುವ ಸಾಧ್ಯತೆಯಿದೆ. ನಾಲ್ಕನೇ ಟೆಸ್ಟ್ ಕೈತಪ್ಪುವುದು ಬಹುತೇಕ ಖಚಿತವಾಗಿದೆ.
ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಾರೆ. ವಿರಾಟ್ ಕೊಹ್ಲಿ, ಕೊನೆಯ ಅಂತರಾಷ್ಟ್ರೀಯ ಶತಕ ಸಿಡಿಸಿದ್ದು 2019ರಲ್ಲಿ. ಪ್ರಸ್ತುತ ಸರಣಿಯಲ್ಲಿ ದೊಡ್ಡ ಸ್ಕೋರ್ ಮಾಡಲು ಕೊಹ್ಲಿ ವಿಫಲರಾಗಿದ್ದಾರೆ.