ಪ್ರಸಿದ್ಧಿ ಪಡೆಯುವ ಉದ್ದೇಶದಿಂದಲೋ ಇಲ್ಲವೇ ಏನಾದರೊಂದು ಸಾಧನೆಯನ್ನು ನಿಜವಾಗಿಯೂ ಮಾಡಬೇಕು ಎನ್ನುವ ಉದ್ದೇಶದಿಂದ ಹುಚ್ಚು ಸಾಹಸಕ್ಕೆ ಕೈಹಾಕುವವರು ಕೆಲವರು. ಕೆಲವೊಮ್ಮೆ ಈ ಸಾಹಸ ಕಾರ್ಯಗಳು ಪ್ರಾಣಕ್ಕೂ ಕುತ್ತು ತರುವುದು ಉಂಟು. ಆದರೆ ಯಾವುದನ್ನೂ ಲೆಕ್ಕಿಸದೇ ಜೀವವನ್ನು ಪಣಕ್ಕಿಡುತ್ತಾರೆ.
ಅಂಥದ್ದೇ ಒಂದು ಭಯಾನಕ ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಅತಿ ಎತ್ತರದ ಪರ್ವತದ ಮೇಲುಗಡೆ ವ್ಯಕ್ತಿಯೊಬ್ಬ ಆರಾಮಾಗಿ ಮಲಗಿರುವ ವಿಡಿಯೋ ಇದಾಗಿದೆ. ಹತ್ತಿರದಿಂದ ನೋಡಿದಾಗ ಇದರಲ್ಲೇನು ಮಹಾ ಎನಿಸುತ್ತದೆ. ವಿಡಿಯೋವನ್ನು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋದಾಗ ಆಹಾ! ಎಂಥ ಪ್ರಕೃತಿ ಸೌಂದರ್ಯದ ನಡುವೆ ಈತ ಮಲಗಿದ್ದಾನೆ ಎನಿಸುತ್ತದೆ.
ಆದರೆ ವಿಡಿಯೋ ಇನ್ನೂ ದೂರಕ್ಕೆ ಹೋದಾಗಲೇ ತಿಳಿಯುವುದು ಈ ವ್ಯಕ್ತಿ ಎಂಥ ಭಯಾನಕ ಜಾಗದಲ್ಲಿ ಮಲಗಿದ್ದಾನೆ ಎನ್ನುವುದು. ಪರ್ವತದಲ್ಲಿರುವ ಉದ್ದದ ಕಲ್ಲುಗಳ ಎರಡೂ ಕಡೆ ಜೋಕಾಲಿಯಂತೆ ಕಟ್ಟಿಕೊಂಡು ಈ ವ್ಯಕ್ತಿ ಅದರಲ್ಲಿ ಮಲಗಿಕೊಂಡಿದ್ದು, ಪರ್ವತದ ಆಳವನ್ನು ನೋಡಿಬಿಟ್ಟರೆ ವಿಡಿಯೋ ನೋಡಿದವರಿಗೇ ತಲೆ ತಿರುಗುವುದು ಗ್ಯಾರೆಂಟಿ.
ಈ ವೈರಲ್ ವಿಡಿಯೋದಲ್ಲಿ ಆ ವ್ಯಕ್ತಿಯ ಸಾಹಸಕ್ಕೆ ತಲೆ ಬಾಗಿದರೆ, ಆ ಜೋಕಾಲಿಯನ್ನು ಕಟ್ಟಿದವರು ಯಾರು, ಹೇಗೆ ಎಂದು ತಲೆ ಕೆಡಿಸಿಕೊಳ್ಳುವಂತಿದೆ. ಅಷ್ಟೇ ಅಲ್ಲದೇ ಇಂಥದ್ದೊಂದು ವಿಡಿಯೋ ಮಾಡಲೂ ಸಾಹಸ ಬೇಕು. ಆ ಸಾಹಸಿಗ ಯಾರಪ್ಪಾ ಎಂದೂ ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಅಸಾಧ್ಯ ಎನಿಸುವ ವಿಡಿಯೋ ಇದಾಗಿದೆ.