
ಚಹಾ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರೋ ಪಾನೀಯಗಳಲ್ಲಿ ಒಂದು. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರಿಗೆ ಬೆಳಗಿನ ತಿಂಡಿ ಜೊತೆಗೆ ಚಹಾ ಬೇಕೆ ಬೇಕು. ಹೀಗೆ ದಿನಕ್ಕೆ 2 ರಿಂದ 3 ಕಪ್ ಚಹಾ ಹೀರುವವರ ಸಂಖ್ಯೆಯೇ ಹೆಚ್ಚಾಗಿದೆ.
ಚಹಾ, ದೇಹ ಹಾಗೂ ಮನಸ್ಸಿಗೆ ಒಂದು ರೀತಿಯ ಚೈತನ್ಯ ತುಂಬುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ದಿನಕ್ಕೆ ನಾಲ್ಕೈದು ಕಪ್ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಅನ್ನೋದು ವೈದ್ಯರ ಅಭಿಪ್ರಾಯ. ಹಾಗಾಗಿ ಚಹಾ ಕುಡಿಯೋದು ಬಿಟ್ಟುಬಿಡಿ ಎಂದೇ ವೈದ್ಯರು ಸಲಹೆ ನೀಡ್ತಾರೆ.
ಅಷ್ಟಕ್ಕೂ ಚಹಾ ಕುಡಿಯೋದ್ರಿಂದ ತೂಕ ಹೆಚ್ಚಾಗುತ್ತಾ ಅನ್ನೋದು ಬಹುತೇಕರನ್ನು ಕಾಡುವ ಅನುಮಾನ. ಚಹಾಕ್ಕೆ ಹಾಲು ಮತ್ತು ಸಕ್ಕರೆ ಬೆರೆಸುವುದರಿಂದ ತೂಕ ಹೆಚ್ಚಾಗಬಹುದು ಅನ್ನೋ ಆತಂಕವೂ ಹಲವರನ್ನು ಕಾಡುತ್ತಿರಬಹುದು. ವಾಸ್ತವ ಏನು ಅನ್ನೋದನ್ನು ತಿಳಿಯೋಣ.
ಚಹಾ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೋ ಅಥವಾ ಇಲ್ಲವೋ ಅನ್ನೋದು ನಾವು ಅದಕ್ಕೆ ಬಳಸುವ ಪದಾರ್ಥಗಳ ಮೇಲೆ ಅವಲಂಬಿತವಾಗಿರುತ್ತದೆ. ಚಹಾಕ್ಕೆ ಹಾಲು ಮತ್ತು ಸಕ್ಕರೆಯನ್ನು ಬೆರೆಸಲಾಗುತ್ತದೆ. ಇವೆರಡೂ ಇಲ್ಲದಿದ್ದರೆ ಚಹಾ ಅಪೂರ್ಣವಾದಂತೆ. ಈ ಎರಡೂ ಪದಾರ್ಥಗಳು ತೂಕ ಹೆಚ್ಚಾಗಲು ತಮ್ಮದೇ ಆದ ಕೊಡುಗೆ ನೀಡುತ್ತವೆ.
ನೀವು ಹೆಚ್ಚಿನ ಕೊಬ್ಬಿನಂಶವಿರುವ ಹಾಲಿನ ಚಹಾವನ್ನು ಸೇವಿಸಿದರೆ, ಅದು ದೇಹದ ಕೊಬ್ಬು ಮತ್ತು ತೂಕವನ್ನು ಹೆಚ್ಚಿಸುತ್ತದೆ. ನೀವು ಸಾಮಾನ್ಯ ಹಾಲಿನ ಚಹಾಕ್ಕೆ ಅರ್ಧ ಟೀ ಚಮಚ ಸಕ್ಕರೆಯನ್ನು ಸೇರಿಸಿಕೊಂಡು ಪ್ರತಿದಿನ ಕುಡಿದರೆ ಅದು ನಿಮ್ಮ ತೂಕವನ್ನು ವಾರ್ಷಿಕವಾಗಿ ಒಂದು ಕೆಜಿಯಷ್ಟು ಹೆಚ್ಚಿಸಬಹುದು. ನೀವು ದಿನಕ್ಕೆ 2 ರಿಂದ 3 ಬಾರಿ ಚಹಾ ಸೇವಿಸಿದರೆ ತೂಕ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತೂಕ ಹೆಚ್ಚಾಗಬಾರದು, ಫಿಟ್ ಆಗಿರಬೇಕು ಎಂದು ಬಯಸಿದರೆ, ಚಹಾ ಕುಡಿಯುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ…
ಚಹಾದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ
ಸಿಹಿ ಇಲ್ಲದೆ ಚಹಾ ಅಪೂರ್ಣ. ಆದರೆ ಉತ್ತಮ ಆರೋಗ್ಯಕ್ಕಾಗಿ ಚಹಾದಲ್ಲಿ ಜಾಸ್ತಿ ಸಕ್ಕರೆಯನ್ನು ಬಳಸಬಾರದು. ಕೃತಕ ಸಿಹಿಯನ್ನೇನಾದರೂ ನೀವು ಬಳಸುತ್ತಿದ್ದರೆ ಅದನ್ನು ಅಲ್ಪ ಪ್ರಮಾಣದಲ್ಲಿ ಹಾಕಿ. ಸಕ್ಕರೆಯ ಬದಲು ಜೇನುತುಪ್ಪ ಅಥವಾ ಬೆಲ್ಲದ ಚಹಾ ಕೂಡ ಕುಡಿಯಬಹುದು.
ಕೊಬ್ಬಿನಂಶ ಹೆಚ್ಚಾಗಿರುವ ಹಾಲಿನ ಬಳಕೆಯನ್ನು ಕಡಿಮೆ ಮಾಡಿ
ನೀವು ಚಹಾವನ್ನು ಇಷ್ಟಪಡುತ್ತಿದ್ದರೆ, ಅದನ್ನು ತ್ಯಜಿಸಲು ಸಾಧ್ಯವೇ ಇಲ್ಲ ಎನಿಸಿದರೆ ಚಹಾಕ್ಕೆ ಕೊಬ್ಬಿನ ಅಂಶ ಕಡಿಮೆ ಇರುವ ಹಾಲನ್ನು ಬಳಸಿ. ಅಪ್ಪಿತಪ್ಪಿಯೂ ಹಾಲಿನ ಪುಡಿಯನ್ನು ಹಾಕಬೇಡಿ.