ಭಾರತಕ್ಕೆ ವಾಯುಮಾಲಿನ್ಯ ಮಾರಕವಾಗ್ತಿದೆ. ವಾಯು ಮಾಲಿನ್ಯ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ. ಸಂಶೋಧಕರ ಪ್ರಕಾರ ಭಾರತದಲ್ಲಿ ಕ್ಷಿಪ್ರ ಕೈಗಾರಿಕೀಕರಣ ಮತ್ತು ನಗರೀಕರಣ ಮಾಲಿನ್ಯವನ್ನು ಹೆಚ್ಚಿಸಿದೆ.
ಭಾರೀ ಲೋಹಗಳು ಮತ್ತು ಧ್ವನಿ ಮಾಲಿನ್ಯ ಸೇರಿದಂತೆ ವಿವಿಧ ರೀತಿಯ ಪರಿಸರ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಮಾನಸಿಕ ಆರೋಗ್ಯದ ಸಮಸ್ಯೆಗೆ ಕಾರಣವಾಗಬಹುದು. ನೇರ ಜೈವಿಕ ಪರಿಣಾಮಗಳು ಮತ್ತು ಒತ್ತಡ ಸಂಬಂಧಿತ ಪರಿಣಾಮಗಳ ಮೂಲಕ ಆತಂಕ, ಮನಸ್ಥಿತಿ ಮತ್ತು ಮನೋವಿಕೃತ ರೋಗಲಕ್ಷಣಗಳಂತಹ ಅಸ್ವಸ್ಥತೆಗಳು ಕಾಡುವ ಅಪಾಯವಿರುತ್ತದೆ.
ಅತಿ ಹೆಚ್ಚು ವಾಯುಮಾಲಿನ್ಯವಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆತಂಕ, ಕಿರಿಕಿರಿ ಮತ್ತು ಚಡಪಡಿಕೆಯ ಲಕ್ಷಣಗಳು ಕೂಡ ಇವರನ್ನು ಕಾಡುತ್ತದೆ.
ಒತ್ತಡ ಹೆಚ್ಚಾಗಬಹುದು…
ಅತಿಯಾದ ವಾಯು ಮಾಲಿನ್ಯಕ್ಕೆ ಒಡ್ಡಿಕೊಂಡರೆ ಒತ್ತಡದ ಹಾರ್ಮೋನುಗಳನ್ನು ಅದು ಹೆಚ್ಚಿಸಬಹುದು. ಇದು ನಮ್ಮ ಆಲೋಚನಾ ಸಾಮರ್ಥ್ಯ, ಸ್ಮರಣೆ ಮತ್ತು ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಅತಿಯಾದ ವಾಯು ಮಾಲಿನ್ಯವಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಸೈಕೋಸಿಸ್ ರೋಗಕ್ಕೆ ತುತ್ತಾಗುತ್ತಾರೆ. ಇದೊಂದು ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ಕಾಯಿಲೆಗೆ ತುತ್ತಾದವರು ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ. ಇದಲ್ಲದೆ ಬಹುಮಹಡಿ ಕಟ್ಟಡಗಳಲ್ಲಿ ವಾಸ, ಕಳಪೆ ಗುಣಮಟ್ಟದ ಮನೆಗಳು ಮತ್ತು ವಿಪರೀತ ಶಬ್ಧಮಾಲಿನ್ಯ ಕೂಡ ಇದಕ್ಕೆ ಕಾರಣವಾಗುತ್ತದೆ.
ವಾಯು ಮಾಲಿನ್ಯವು ವ್ಯಕ್ತಿನಿಷ್ಠ ಯೋಗಕ್ಷೇಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಆತಂಕ, ಖಿನ್ನತೆ ಮತ್ತು ಚಡಪಡಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉರಿಯೂತದ ಹೆಚ್ಚಳ, ನರಗಳ ಕ್ಷೀಣತೆ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ಮುಂತಾದ ಅನೇಕ ನ್ಯೂರೋಬಯಾಲಾಜಿಕಲ್ ಬದಲಾವಣೆಗಳು ಉಂಟಾಗುತ್ತವೆ.
ಭಾವನಾತ್ಮಕ ಸಮಸ್ಯೆಗಳ ಅಪಾಯ…
ಮಾಲಿನ್ಯಕ್ಕೆ ಒಡ್ಡಿಕೊಂಡರೆ ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಪ್ರದೇಶಗಳಲ್ಲಿ ಬದಲಾವಣೆಗಳಾಗುತ್ತವೆ. ಮತ್ತೊಂದು ಸಂಶೋಧನೆಯ ಪ್ರಕಾರ ಕಲುಷಿತ ಗಾಳಿಯನ್ನು ಉಸಿರಾಡುವ ಮಕ್ಕಳು ಮತ್ತು ಹದಿಹರೆಯದವರು ಖಿನ್ನತೆಗೆ ತುತ್ತಾಗುತ್ತಾರೆ. ಆತ್ಮಹತ್ಯಾ ನಡವಳಿಕೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.