ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧೀನದ ಮೃಗಾಲಯಗಳಲ್ಲಿ ಕಳೆದ 9 ತಿಂಗಳಲ್ಲಿ 75.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
2022ರ ಏಪ್ರಿಲ್ 1 ರಿಂದ ಡಿಸೆಂಬರ್ 31ರವರೆಗಿನ 9 ತಿಂಗಳ ಅವಧಿಯಲ್ಲಿ 52,77,013 ಜನ ಮೃಗಾಲಯಗಳಿಗೆ ಭೇಟಿ ನೀಡಿದ್ದು, 75.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೋನಾ ನಂತರ ಮೃಗಾಲಯಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಮೈಸೂರು ಮೃಗಾಲಯಕ್ಕೆ 25.05 ಲಕ್ಷ ಜನ ಭೇಟಿ ನೀಡಿದ್ದು, 24.76 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಬನ್ನೇರುಘಟ್ಟಕ್ಕೆ 16.12 ಲಕ್ಷ ಜನ ಭೇಟಿ ನೀಡಿದ್ದು, 42.68 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಶಿವಮೊಗ್ಗ ಮೃಗಾಲಯಕ್ಕೆ 2.41 ಲಕ್ಷ ಜನ ಭೇಟಿ ನೀಡಿದ್ದು, 3.22 ಕೋಟಿ ರೂ. ಸಂಗ್ರಹವಾಗಿದೆ. ಮೈಸೂರು ಮೃಗಾಲಯಕ್ಕೆ ಡಿಸೆಂಬರ್ ತಿಂಗಳಲ್ಲಿ 5.24 ಲಕ್ಷ ಜನ ಭೇಟಿ ನೀಡಿರುವುದು ಇತ್ತೀಚಿನ ವರ್ಷಗಳಲ್ಲಿ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.