ಟಿವಿ, ಮೊಬೈಲ್ ನೋಡುವ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಳವಾಗಿದೆ. ರಾಜ್ಯದಲ್ಲಿ 6ರಿಂದ 16 ವರ್ಷದ ಸುಮಾರು 38,000 ಮಕ್ಕಳಲ್ಲಿ ದೃಷ್ಟಿ ದೋಷ ಕಂಡುಬಂದಿದ್ದು, ಕನ್ನಡಕಗಳನ್ನು ವಿತರಿಸಲಾಗಿದೆ.
ಆರೋಗ್ಯ ಇಲಾಖೆ 8 ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಮಾಹಿತಿ ಗೊತ್ತಾಗಿದೆ. ಹೆಚ್ಚು ಹೊತ್ತು ಟಿವಿ, ಮೊಬೈಲ್ ನೋಡದಂತೆ ಪೋಷಕರು ಹೇಳಿದರೂ ಮಕ್ಕಳು ಕೇಳಿಸಿಕೊಳ್ಳುವುದಿಲ್ಲ. ಕೋವಿಡ್ ಬಳಿಕ ಮೊಬೈಲ್, ಟಿವಿ ವೀಕ್ಷಣೆ ಹೆಚ್ಚಾಗಿದ್ದು, ಇದರಿಂದಾಗಿ ಸಣ್ಣ ವಯಸ್ಸಿನಲ್ಲಿ ದೃಷ್ಟಿ ದೋಷ ಸಮಸ್ಯೆ ಗಂಭೀರವಾಗುತ್ತಿದೆ. ಕನ್ನಡಕ ಬಳಸುವ ಅನಿವಾರ್ಯತೆ ಎದುರಾಗಿದೆ.
2022 -23ನೇ ಸಾಲಿನಲ್ಲಿ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂಧ್ಯತೆ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿವರೆಗಿನ ಸುಮಾರು 63.75 ಲಕ್ಷ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1.7 ಲಕ್ಷ ಮಕ್ಕಳಲ್ಲಿ ಕಣ್ಣಿನ ದೋಷ ಕಂಡು ಬಂದಿದೆ.
ವಿದ್ಯಾರ್ಥಿಗಳು ಹೆಚ್ಚು ಟಿವಿ, ಮೊಬೈಲ್ ನೋಡುವುದು, ಇದರೊಂದಿಗೆ ಹುಟ್ಟಿದಾಗಿನಿಂದ ಸಮಸ್ಯೆಗಳು ಸೇರಿ ಕೆಲವು ಪ್ರಮುಖ ಕಾರಣಗಳಿವೆ. ರಾಜ್ಯ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ ಆಶಾ ಕಿರಣ ಯೋಜನೆಯಡಿ 8 ಜಿಲ್ಲೆಗಳ ವಿದ್ಯಾರ್ಥಿಗಳ ನೇತ್ರ ತಪಾಸಣೆ ನಡೆಸಲಾಗಿದೆ. 37,431 ವಿದ್ಯಾರ್ಥಿಗಳು ಕನ್ನಡಕ ಹಾಕಿಕೊಳ್ಳುವಂತಾಗಿದೆ.