ಬೆಳಗಾವಿ: ರಾಜ್ಯದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಅವರು ಮಾತನಾಡಿ, ಗ್ರಾಪಂಗಳ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಡದ ಎಲ್ಲಾ ಜಮೀನು, ಕಟ್ಟಡಗಳ ಸಾಕ್ಷಾತ್ ಸಮೀಕ್ಷೆಯ ನಂತರ ಆಸ್ತಿಗಳನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ದಾಖಲೀಕರಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎನ್. ರವಿ ಕುಮಾರ್ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿ, ಇದುವರೆಗೆ 1.41 ಕೋಟಿ ಆಸ್ತಿಗಳ ಸಮೀಕ್ಷೆ ನಡೆಸಲಾಗಿದೆ. 8.61 ಲಕ್ಷ ಆಸ್ತಿಗಳು ಹೆಚ್ಚುವರಿಗಾಗಿ ಸೇರ್ಪಡೆಯಾಗಿವೆ. ಆಸ್ತಿಗಳು ಗೊತ್ತಾಗುವುದರಿಂದ ಗ್ರಾಮಗಳ ತೆರಿಗೆ ಹೆಚ್ಚಾಗಲಿದೆ. ಕೆಲವು ಮಹಾನಗರಗಳ ಸುತ್ತಮುತ್ತ ಪ್ರತಿಷ್ಠಿತ ಸಂಸ್ಥೆ, ಉದ್ಯಮಗಳು ಸಾಕಷ್ಟು ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಯಾ ಗ್ರಾಮ ಪಂಚಾಯ್ತಿಗಳಿಗೆ ತೆರಿಗೆ ಸಂದಾಯವಾಗುತ್ತಿಲ್ಲ. ಆಸ್ತಿ ಸಮೀಕ್ಷೆ ಮತ್ತು ದಾಖಲೀಕರಣದಿಂದ ಆದಾಯ ವೃದ್ಧಿಗೆ ಅನುಕೂಲವಾಗುತ್ತದೆ. ತೆರಿಗೆ ಸಂಗ್ರಹದಲ್ಲಿ ದಕ್ಷತೆ ಬರಲಿದ್ದು, ಸೋರಿಕೆ ತಡೆಗೆ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.