2023 – 24 ನೇ ಆರ್ಥಿಕ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ. 8.4 ರಷ್ಟು ಏರಿಕೆಯಾಗಿದ್ದರೆ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.13.3 ರಷ್ಟು ಏರಿಕೆಯಾಗಿದೆ. ಇನ್ನು ಯುಟಿಲಿಟಿ ವಾಹನಗಳ ಮಾರಾಟದಲ್ಲಿ 25.8ರಷ್ಟು ಹೆಚ್ಚಳವಾಗಿದೆ.
ಈ ಆರ್ಥಿಕ ವರ್ಷದಲ್ಲಿ 42.18 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, 2022 – 23 ನೇ ಆರ್ಥಿಕ ವರ್ಷದಲ್ಲಿ 38.90 ಲಕ್ಷ ವಾಹನಗಳು, ಮಾರಾಟವಾಗಿದ್ದವು. ಇನ್ನು 2023 – 24 ರಲ್ಲಿ 1.79 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಹಿಂದಿನ ಆರ್ಥಿಕ ವರ್ಷದಲ್ಲಿ 1.58 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.
ಯುಟಿಲಿಟಿ ವಾಹನಗಳ ಮಾರಾಟದಲ್ಲೂ ಸಹ ಹೆಚ್ಚಳವಾಗಿದ್ದು 2023 – 24 ರಲ್ಲಿ 25.20 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. 2022 – 23ರಲ್ಲಿ ಮಾರಾಟವಾದ ಯುಟಿಲಿಟಿ ವಾಹನಗಳ ಸಂಖ್ಯೆ 20.03 ಲಕ್ಷ ಇತ್ತು. ಇನ್ನು ವಾಹನಗಳ ರಫ್ತಿನಲ್ಲಿ ಇಳಿಕೆ ಕಂಡಿದ್ದು, 2022 – 23 ರಲ್ಲಿ 47.61 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿದ್ದರೆ, 2023 – 24ರಲ್ಲಿ ಶೇಕಡ 5.5ರಷ್ಟು ಇಳಿಕೆಯೊಂದಿಗೆ 45 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ.