ಆಗಸ್ಟ್ ತಿಂಗಳು ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ದೇಶದಾದ್ಯಂತ ಜನತೆ ಇಂದು ಗಣಪತಿ ಹಬ್ಬದ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಸೆಪ್ಟೆಂಬರ್ ಒಂದರ ನಾಳೆಯಿಂದ ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳಾಗಲಿವೆ.
ಪ್ರತಿ ತಿಂಗಳ ಮೊದಲ ದಿನದಂದು ಎಲ್ ಪಿ ಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡಲಾಗುತ್ತಿದ್ದು ಇದು ಏರಿಕೆ ಅಥವಾ ಇಳಿಕೆಯಾಗಲಿದೆ. ಈ ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ.
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಮಾಡಲು ತಿಳಿಸಿದ್ದು, ಅದಕ್ಕೆ ಇಂದೇ ಕೊನೆಯ ದಿನವಾಗಿದೆ. ಇದನ್ನು ಅಪ್ಡೇಟ್ ಮಾಡದಿದ್ದರೆ ನಾಳೆಯಿಂದ ಹಣ ವರ್ಗಾವಣೆ ಮಾಡಲು ಅವಕಾಶ ಸಿಗದಿರಬಹುದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಧನಸಹಾಯ ಪಡೆಯಲು ಸಹ ಕೆವೈಸಿ ಅಪ್ಡೇಟ್ ಮಾಡಬೇಕಾಗಿದ್ದು, ಅದಕ್ಕೆ ಇಂದೇ ಕೊನೆಯ ದಿನವಾಗಿದೆ. ಅದನ್ನು ಇಂದು ಪೂರ್ಣಗೊಳಿಸದಿದ್ದರೆ ಮುಂದಿನ ಕಂತು ಖಾತೆಗೆ ಜಮೆಯಾಗದಿರಬಹುದು.
ಇನ್ಸೂರೆನ್ಸ್ ಏಜೆಂಟರ ಕಮೀಷನ್ ದರದಲ್ಲೂ ನಾಳೆಯಿಂದ ಬದಲಾವಣೆಯಾಗುತ್ತಿದ್ದು, ಇನ್ನು ಮುಂದೆ 30 ರಿಂದ 35 ಶೇಕಡ ಕಮೀಷನ್ ಬದಲಾಗಿ ಶೇಕಡ 20 ಕಮೀಷನ್ ಮಾತ್ರ ಸಿಗಲಿದೆ. ಇದರಿಂದ ವಿಮೆದಾರರ ಪ್ರೀಮಿಯ ಮೊತ್ತ ಕಡಿಮೆಯಾಗಬಹುದು ಎನ್ನಲಾಗಿದೆ.