ಮುಂಬೈ: ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ “ಆತಂಕಕಾರಿಯಾಗಿದೆ” ಮತ್ತು ಸಂಬಂಧಪಟ್ಟ ಎಲ್ಲರೂ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.
ಮಾನಸಿಕ ಯೋಗಕ್ಷೇಮ ಸೇರಿದಂತೆ ಪ್ರತಿಯೊಬ್ಬರ ಯೋಗಕ್ಷೇಮ ನೋಡಿಕೊಳ್ಳುವಂತೆ ತಿಳಿಸಲಾಗಿದೆ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಶೋಭಾ ಪಂಚಮುಖ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಾಲಯ, ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಪರಿಹರಿಸಲು ಸಲಹೆಗಾರರನ್ನು ಹೊಂದಲು ಎಲ್ಲಾ ಸಂಯೋಜಿತ /ಸಂಬಂಧಿತ ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಲು ಮುಂಬೈ ವಿಶ್ವವಿದ್ಯಾಲಯ(MU) ಗೆ ನಿರ್ದೇಶನ ನೀಡಿದೆ.
ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರವೃತ್ತಿಯನ್ನು ತಡೆಗಟ್ಟಲು ಇದುವರೆಗೆ ಲಭ್ಯವಿರುವ ಅಸಮರ್ಪಕ ಕ್ರಮಗಳ ಬಗ್ಗೆ PIL ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಪ್ರಕಾರ 2019, 2020 ಮತ್ತು 2021 ರಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕ್ರಮವಾಗಿ 1487, 1648 ಮತ್ತು 1834 ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಮಾನಸಿಕ ಯೋಗಕ್ಷೇಮ ಸೇರಿದಂತೆ ಯೋಗಕ್ಷೇಮವು ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಅವಿಭಾಜ್ಯ ಅಂಗವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಪೀಠ ಹೇಳಿದೆ.