ಬೆಂಗಳೂರು: ಸಂಘ ಸಂಸ್ಥೆಗಳ ಅನುದಾನ ಮಿತಿ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸಂಘಗಳಿಗೆ ನೀಡಲಾಗುವ ಧನಸಹಾಯ ಕುರಿತಾದ ನಿಬಂಧನೆಗಳನ್ನು ಸಡಿಲಿಕೆ ಮಾಡಲಾಗಿದೆ.
ಸಂಸ್ಥೆಯೊಂದಕ್ಕೆ ನೀಡುವ ಗರಿಷ್ಠ ಅನುದಾನದ ಮಿತಿಯನ್ನು 2 ಲಕ್ಷ ರೂ. ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ ನೋಂದಾಯಿತ ಸಂಘ-ಸಂಸ್ಥೆ ಮತ್ತು ಟ್ರಸ್ಟ್ ಗಳಿಗೆ ಧನಸಹಾಯದ ಪರಿಷ್ಕೃತ ಮಾರ್ಗಸೂಚಿಗೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.
ಮೂರು ವರ್ಷದಿಂದ ನಿರಂತರವಾಗಿ ಅನುದಾನ ಪಡೆಯುವ ಸಂಘ-ಸಂಸ್ಥೆಗಳು ನಾಲ್ಕನೇ ವರ್ಷ ಧನಸಹಾಯ ಪಡೆದುಕೊಳ್ಳುವಂತಿಲ್ಲ ಎನ್ನುವ ನಿಯಮ ಕೈ ಬಿಡಲಾಗಿದ್ದು, ಈ ಮೊದಲಿನಂತೆ ಸಂಘ ಸಂಸ್ಥೆಗಳು ನಿರಂತರವಾಗಿ ಅನುದಾನ ಪಡೆಯಬಹುದಾಗಿದೆ.
ನಿರ್ಬಂಧ ಸಡಿಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಆರ್ಥಿಕ ನೆರವು ಪಡೆದು ಆಯೋಜಿಸುವ ಕಾರ್ಯಕ್ರಮಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಸಹಾಯಕ ನಿರ್ದೇಶಕರ ಗಮನಕ್ಕೆ ತಂದು ಕಡ್ಡಾಯವಾಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎನ್ನುವ ನಿಯಮ ಕೈಬಿಡಲಾಗಿದೆ.