ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಹೆಚ್ಚಳ ಮಾಡಿದ್ದು, ಇದರಿಂದಾಗಿ ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂಪಾಯಿ, ಡೀಸೆಲ್ ದರ ಲೀಟರ್ ಗೆ 3.50 ರೂ. ಹೆಚ್ಚಳವಾಗಿದೆ.
ಸರ್ಕಾರ ಶನಿವಾರ ಈ ಕುರಿತು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಆದೇಶ ಜಾರಿಗೆ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕ ವೆಚ್ಚ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ದರ ಹೆಚ್ಚಾಗಲಿದೆ.
ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ದರ ಈ ಹಿಂದೆ ಶೇಕಡ 14.34 ರಷ್ಟು ಇತ್ತು. ಈಗ ಶೇಕಡ 4.1 ರಷ್ಟು ಹೆಚ್ಚಿಸಿದ್ದು, ಶೇಕಡ 18.44ಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ ಹಿಂದೆ ಶೇಕಡ 25.92 ರಷ್ಟು ಇತ್ತು. ಈಗ ಶೇಕಡ 3.9 ರಷ್ಟು ಹೆಚ್ಚಳ ಮಾಡಿರುವುದರಿಂದ ಶೇಕಡ 29.84ಕ್ಕೆ ಏರಿಕೆಯಾಗಿದೆ.
ಈಗ ಪೆಟ್ರೋಲ್ ದರ ಲೀಟರ್ ಗೆ 103 ರೂ.ಗೆ, ಡೀಸೆಲ್ ದರ ಲೀಟರ್ ಗೆ 91.50 ರೂ. ಆಗಲಿದ್ದು ಸಾಗಾಣಿಕೆ ವೆಚ್ಚಕ್ಕೆ ಅನುಗುಣವಾಗಿ ವಿವಿಧ ಜಿಲ್ಲೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಇಂಧನ ದರ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಕೂಡ ಹೆಚ್ಚಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.