ಬೆಂಗಳೂರು: ರಾಜ್ಯದಲ್ಲಿ ಗಲಭೆ, ಗುಂಪು ಘರ್ಷಣೆಯಲ್ಲಿ ಹತ್ಯೆಯಾದ ಅಥವಾ ಗಾಯಗೊಂಡ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಲು ನಿರ್ಧರಿಸಿದೆ.
ಈ ಪರಿಹಾರದ ಮೊತ್ತವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಮೃತರ ಅವಲಂಬಿತರಿಗೆ ಕನಿಷ್ಠ 5 ಲಕ್ಷ ಗರಿಷ್ಠ 10 ಲಕ್ಷ ರೂಪಾಯಿ ಪರಿಹಾರ ನಿಗದಿಗೊಳಿಸಲಾಗಿದೆ. ಗಲಭೆ ಸಂತ್ರಸ್ತರಿಗೆ 6 ವರ್ಗೀಕರಣಗಳ ಅನ್ವಯ ಕನಿಷ್ಠ ಒಂದು ಲಕ್ಷ ರೂ.ಗಿಂತ ಮೇಲ್ಪಟ್ಟು ಪರಿಹಾರ ನಿಗದಿ ಪಡಿಸಲಾಗಿದೆ.
ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011ರ ಅನ್ವಯ ಗುಂಪುಗಳ ಸೌಲಭ್ಯ ಸಿಗಲಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ ಬುಧವಾರ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಸಂಭವಿಸುವ ಗುಂಪು ಹತ್ಯೆ ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ ಹಾಗೂ ಅವರ ಅವಲಂಬಿತರಿಗೆ ಸಂತ್ರಸ್ತ ಪರಿಹಾರ ಅನ್ವಯವಾಗಲಿದೆ. ಪ್ರಾಣಹಾನಿಗೆ ಕನಿಷ್ಠ 5 ರಿಂದ 10 ಲಕ್ಷ ರೂ., ಪುನರ್ವಸತಿ ಕಲ್ಪಿಸಲು ಗಾಯ ಅಥವಾ ಇತರೆ ಮಾನಸಿಕ ಹಾನಿಯಾಗಿದ್ದರೆ ಒಂದರಿಂದ ಎರಡು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ದೇಹದ ಅಂಗಾಂಗಗಳು ಕಾಯಂ, ಭಾಗಶಃ ಅಂಗವೈಕಲ್ಯ ಆಗಿದ್ದರೆ 2 ರಿಂದ 4 ಲಕ್ಷ ರೂ. ಪರಿಹಾರ ಸಿಗಲಿದೆ.