ಬೆಂಗಳೂರು: ವಸತಿ ಯೋಜನೆಯ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್ ಕುಮಾರ್ ಅವರು ವಿಷಯ ಪ್ರಸ್ತಾಪಿಸಿ, ರಾಜೀವ್ ಗಾಂಧಿ ವಸತಿ ನಿಗಮದಡಿ ನೀಡಲಾಗುವ ಮನೆಗಳಿಗೆ ಫಲಾನುಭವಿಗಳಿಗೆ ವಿಧಿಸಿದ ವಾರ್ಷಿಕ ಆದಾಯ ಮಿತಿಯಿಂದ ತೊಂದರೆಯಾಗಿದೆ ಎಂದು ದೂರಿದ್ದಾರೆ.
ವಸತಿ ಇಲಾಖೆ 37,000 ರೂ.ಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಮನೆ ನೀಡುವುದಿಲ್ಲವೆಂದು ತಿಳಿಸಿದೆ. ಕಂದಾಯ ಇಲಾಖೆ 45,000 ರೂ.ಗಿಂತ ಕಡಿಮೆ ಆದಾಯ ಇರುವ ಬಗ್ಗೆ ಆದಾಯ ಪ್ರಮಾಣ ಪತ್ರ ನೀಡುವಂತಿಲ್ಲವೆಂದು ತಹಶೀಲ್ದಾರ್ ಗಳಿಗೆ ಆದೇಶಿಸಿದ್ದರಿಂದ ಸಮಸ್ಯೆಯಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಸರ್ಕಾರಿ ವಸತಿ ಯೋಜನೆಗಳ ಫಲಾನುಭವಿಗಳಿಗೆ ವಾರ್ಷಿಕ ಆದಾಯ ಮಿತಿ ಹೆಚ್ಚಳ ಮಾಡಲಾಗಿದೆ. ನಗರ ಪ್ರದೇಶದಲ್ಲಿ 87,000 ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ 37,000 ರೂ.ನಿಂದ 1.20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಹಿಂದಿನ ಜಿಲ್ಲಾಧಿಕಾರಿಗಳು 45,000 ರೂ.ಗಿಂತ ಕಡಿಮೆ ಆದಾಯ ಇರುವಂತೆ ಪ್ರಮಾಣಪತ್ರ ನೀಡಬೇಡಿ ಎಂದು ಆದೇಶಿಸಿದ್ದರು. ಈ ಆದೇಶ ಹಿಂಪಡೆದು ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.