ಅಡುಗೆ ಮನೆಯ ಡಬ್ಬ ಹುಡುಕಾಡಿದ್ರೆ ಒಂದಿಷ್ಟು ಹಣ ಸಿಗುತ್ತದೆ. ಗೃಹಿಣಿಯರು ಮನೆ ನಿಭಾಯಿಸುವ ವೇಳೆ ಒಂದಿಷ್ಟು ಉಳಿತಾಯ ಮಾಡ್ತಾರೆ. ಪತಿಯಿಂದ ಪಡೆದ ಹಣವನ್ನು ಡಬ್ಬದಲ್ಲಿಡ್ತಾರೆ. ಮನೆಗೆ ಬಂದ ಸಂಬಂಧಿಕರು ಮಕ್ಕಳಿಗೆ ಕೊಡುವ ಹಣ ಕೂಡ ತಾಯಿ ಪಾಲಾಗುತ್ತದೆ. ಈ ಹಣವನ್ನು ಮಹಿಳೆಯರ ಆದಾಯವೆಂದು ಪರಿಗಣಿಸಲಾಗುವುದಿಲ್ಲವೆಂದು ಆಗ್ರಾದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಪೀಠ ಹೇಳಿದೆ.
ಗೃಹಿಣಿ ಮನೆ ಕೆಲಸ ಬಿಟ್ಟು ಬೇರೆ ಯಾವುದೇ ಕೆಲಸ ಮಾಡದೆ ಹೋದಲ್ಲಿ ಆಕೆ ಮನೆ ನಿರ್ವಹಣೆಯ ಹೊಣೆ ಹೊತ್ತಿರುತ್ತಾಳೆ. ಆಕೆ ಸಾವಿರದಿಂದ ಲಕ್ಷದವರೆಗೆ ಹಣ ಉಳಿಸುತ್ತಾರೆ. ಈ ಹಣಕ್ಕೆ ತೆರಿಗೆ ವಿಧಿಸಬೇಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನೋಟು ನಿಷೇಧದ ಸಂದರ್ಭದಲ್ಲಿ ಮಹಿಳೆಯೊಬ್ಬಳು 2,11,500 ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಬದಲಿಸಿದ್ದಳು. ಆಗ ಉಳಿತಾಯದ ಹಣ ಎಂದಿದ್ದ ಮಹಿಳೆಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಮೊರೆ ಹೋಗಿದ್ದಳು.
ಇದ್ರ ವಿಚಾರಣೆ ನಡೆಸಿದ ನ್ಯಾಯಪೀಠ, ಇದಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದಿದೆ. ಮಹಿಳೆ ಕೆಲ ವರ್ಷಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಣ್ಣಪುಟ್ಟ ಕೆಲಸ ಮಾಡ್ತಿದ್ದಾಳೆಂದು ಅಧಿಕಾರಿಗಳು ಹೇಳಿದ್ದರು. ಆದ್ರೆ ಅದಕ್ಕೆ ಯಾವುದೇ ಪುರಾವೆಯಿಲ್ಲದ ಕಾರಣ ತೆರಿಗೆ ಮುಕ್ತಗೊಳಿಸಲಾಗಿದೆ.