ಬೆಂಗಳೂರು: ಇನಾಂ ಸಾಗುವಳಿ ಜಮೀನುಗಳ ಮರು ಮಂಜೂರಾತಿ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷ ಕಾಲ ಸರ್ಕಾರ ವಿಸ್ತರಿಸಿದೆ.
ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಇನಾಂ ಜಮೀನು ಇದೆ. ಹಿಂದೆ ರಾಜರು ಮತ್ತು ಬ್ರಿಟಿಷರ ಕಾಲದಲ್ಲಿ 100 ರಿಂದ ಸಾವಿರ ಎಕರೆ ಪ್ರದೇಶವನ್ನು ಹಲವರಿಗೆ ಇನಾಂ ರೂಪದಲ್ಲಿ ನೀಡಲಾಗಿದೆ. ರೈತರು ಇಂತಹ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಕಾಲಕಾಲಕ್ಕೆ ಸರ್ಕಾರದಿಂದ ಪಹಣಿ ನೀಡಲಾಗಿದೆ. ಆದರೆ, ತಿಳಿವಳಿಕೆ ಕೊರತೆಯಿಂದ ಲಕ್ಷಾಂತರ ರೈತರು ಅರ್ಜಿ ಸಲ್ಲಿಸಿಲ್ಲ.
ಇಂತಹ ರೈತರಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕಿದೆ. ಈ ಕುರಿತಾಗಿ ಅಧ್ಯಯನ ನಡೆಸಿದ ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ನೇತೃತ್ವದ ಸಮಿತಿ ವರದಿ ನೀಡಿದ್ದು, ಈ ವರದಿಯನ್ವಯ ಹಕ್ಕು ವಂಚಿತ ಇನಾಂ ಜಮೀನು ಸಾಗುವಳಿ ರೈತರಿಗೆ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.