ಕೊರೊನಾ ಲಸಿಕೆ ನಂತರದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಿಸತೊಡಗಿದೆ. ಅದರಲ್ಲೂ ಅಮೆರಿಕದಲ್ಲಿ ಹೊಸ ಕೊರೊನಾ ವೈರಸ್ ಆತಂಕ ಮೂಡಿಸಿದೆ.
ಬ್ರಿಟನ್ನಲ್ಲಿ ಕಂಡುಬಂದಿದ್ದ ವೈರಸ್ ಗಿಂತಲೂ ಅಮೆರಿಕದಲ್ಲಿ ಕಂಡುಬಂದ ವೈರಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಸಮುದಾಯದಲ್ಲಿ ಅತಿವೇಗವಾಗಿ ಹರಡುವ ರೂಪಾಂತರ ವೈರಸ್ ಆಗಿದೆ. ಈಗ ಪ್ರಸ್ತುತ ಇರುವ ಲಸಿಕೆ ಇದರ ಮೇಲೆ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಹಾಗಾಗಿ ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿಯ ಬ್ರಯಾನ್ ಓ ರಾಕ್ ಈ ಕುರಿತು ಮಾತನಾಡಿ, ಈ ವೈರಸ್ ಬೇರೆ ಕಡೆಯಿಂದ ಬಂದಿಲ್ಲ. ಇದ್ದಕ್ಕಿದ್ದಂತೆ ಮುನ್ನೆಲೆಗೆ ಬಂದು ಆತಂಕ ತಂದಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಲ್ಲಿ ರೂಪಾಂತರಿ ವೈರಸ್ ಪತ್ತೆ ಬಗ್ಗೆ ಚರ್ಚೆ ಮಾಡಿದ್ದು, ಹೆಚ್ಚಿನ ಆವಿಷ್ಕಾರದ ನಂತರ ಡೇಟಾಬೇಸ್ ಅನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಬ್ರಿಟನ್ ನಲ್ಲಿ ಕಂಡುಬಂದ ವೈರಸ್ ಗಿಂತಲೂ ಅಮೆರಿಕದಲ್ಲಿ ಕಂಡುಬಂದ ರೂಪಾಂತರ ವೈರಸ್ ಹೆಚ್ಚು ಅಪಾಯಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಹೊಸ ಹೈಸ್ಪೀಡ್ ವೈರಸ್ನಿಂದ ಅಮೆರಿಕದಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ಕಂಡುಬರಲಿವೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಆಫ್ರಿಕಾ, ಬ್ರೆಜಿಲ್, ನ್ಯೂಯಾರ್ಕ್ ನಗರಗಳಲ್ಲಿ ವೈರಸ್ ಹರಡುವಲ್ಲಿ ಇಂತಹ ರೂಪಾಂತರ ವೈರಸ್ ಕಂಡು ಬಂದಿವೆ. ಕ್ಲಿನಿಕ್ ನಲ್ಲಿ ಕಂಡುಕೊಂಡ ಮಾಹಿತಿಯಂತೆ ರೂಪಾಂತರಿ ವೈರಸ್ ಗಳ ಮೇಲೆ ಲಸಿಕೆ ಕಡಿಮೆ ಪರಿಣಾಮಕಾರಿಯಾಗಿದೆ. ಆದರೆ, ಸಂಶೋಧನೆಗಳು ಮುಂದುವರೆದಿರುವುದರಿಂದ ಸೋಂಕು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ.
ಈಗ ಅಮೆರಿಕದಲ್ಲಿ ಕಂಡು ಬಂದಿರುವ ರೂಪಾಂತರಿ ವೈರಸ್ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿರಬಹುದೆಂದು ಹೇಳಲಾಗಿದ್ದು, ಅಮೆರಿಕದಲ್ಲಿ ಅತಿವೇಗವಾಗಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.