ತಮಿಳುನಾಡಿನಲ್ಲಿ ಜಾತಿ ತಾರತಮ್ಯ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ಈರೋಡ್ ಜಿಲ್ಲೆಯಲ್ಲಿ ದಲಿತ ವಿದ್ಯಾರ್ಥಿಗಳೆಂಬ ಕಾರಣಕ್ಕೆ ವಿದ್ಯಾರ್ಥಿಗಳ ಕೈಯಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಮಾಹಿತಿ ಪ್ರಕಾರ ಈ ಕೃತ್ಯವನ್ನು ಶಾಲೆಯ ಪ್ರಾಂಶುಪಾಲರೇ ಹೊರತುಪಡಿಸಿ ಬೇರೆ ಯಾರೂ ಮಾಡಿಸಿಲ್ಲ. ಇದೀಗ ಪೊಲೀಸರು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಈಗ ಶಾಲೆಯ ಪ್ರಾಂಶುಪಾಲೆ ತಲೆಮರೆಸಿಕೊಂಡಿದ್ದು, ಆಕೆಗಾಗಿ ಹುಡುಕಾಟ ನಡೆಯುತ್ತಿದೆ.
ಐದನೇ ತರಗತಿ ವಿದ್ಯಾರ್ಥಿನಿಯ ತಾಯಿ ಪೊಲೀಸರಿಗೆ ದೂರು ನೀಡಿರುವ ಪ್ರಕಾರ, ಆಕೆಯ ಮಗಳಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೊಬ್ಬಳಿಗೆ ಅಲ್ಲ. ಶಾಲೆಯ ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಅದು ಕೂಡಾ ದಲಿತ ವಿದ್ಯಾರ್ಥಿಗಳಿಗೆ ಕಾಣಿಸಿಕೊಂಡಿದ್ದು, ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು.
ಆಗ ಇದಕ್ಕೆ ಕಾರಣ ಏನಿರಬಹುದು ಅಂತ ವಿಚಾರಿಸಿದಾಗ ಡೆಂಗ್ಯೂ ಕಾಣಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಂದ ಕೆಲ ದಿನಗಳ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯನಿ ಗೀತಾರಾಣಿಯವರು ಶಾಲೆಯ ಶೌಚಾಲಯ ಅವರ ಕೈಯಿಂದ ಸ್ವಚ್ಛಗೊಳಿಸಿರುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ತೊಳೆಸಿರುವುದು ಎಷ್ಟು ಸಮಂಜಸ ಅನ್ನುವುದು ವಿದ್ಯಾರ್ಥಿಗಳ ಪಾಲಕರ ಪ್ರಶ್ನೆಯಾಗಿದೆ.
ಕಳೆದ ವಾರವೂ ವಿದ್ಯಾರ್ಥಿಗಳು ಕೈಯಲ್ಲಿ ಪೊರಕೆ ಮತ್ತು ಮಗ್ಗಳೊಂದಿಗೆ ಶೌಚಾಲಯದಿಂದ ಹೊರಬರುವುದನ್ನು ಪೋಷಕರು ನೋಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಐದನೇ ತರಗತಿಯಲ್ಲಿ ಸುಮಾರು 40 ಮಕ್ಕಳು ಓದುತ್ತಿದ್ದು, ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಾಗಿದ್ದಾರೆ. ಈಗ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿರುವ ವಿದ್ಯಾರ್ಥಿನಿಯ ತಾಯಿ ಈ ರೀತಿಯ ಕೆಲಸ ಏಕೆ ದಲಿತ ಮಕ್ಕಳಿಂದ ಮಾಡಿಸಲಾಗುತ್ತಿದೆ ಎಂದು ಕೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೇ ಎಸ್ಸಿ/ಎಸ್ಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.