ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬೇಸಿಗೆಯನ್ನು ಎದುರು ನೋಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ನೆನೆಸಿಡಬೇಕು. ಈ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಮಾವನ್ನು ನೀರಿನಲ್ಲಿ ನೆನೆಸುವುದು ಅವಶ್ಯಕ. ಹಣ್ಣುಗಳನ್ನು ತಿನ್ನುವ ಮೊದಲು 1 ರಿಂದ 2 ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿಡಲು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಸಮಯದ ಕೊರತೆಯಿದ್ದರೆ 20-30 ನಿಮಿಷಗಳ ಕಾಲವಾದರೂ ನೀರಿನಲ್ಲಿ ಇಟ್ಟು ನಂತರ ತಿನ್ನಬಹುದು.
ಮಾವಿನ ಹಣ್ಣನ್ನೇಕೆ ನೀರಿನಲ್ಲಿ ನೆನೆಸಬೇಕು?
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಅದರಲ್ಲಿರುವ ಹೆಚ್ಚುವರಿ ಫೈಟಿಕ್ ಆಮ್ಲವನ್ನು ತೆಗೆದುಹಾಕಬಹುದು. ಇದು ಒಂದು ರೀತಿಯ ವಿರೋಧಿ ಪೋಷಕಾಂಶವಾಗಿದ್ದು, ದೇಹವು ಕಬ್ಬಿಣ, ಸತು, ಕ್ಯಾಲ್ಸಿಯಂ ಮತ್ತು ಖನಿಜಗಳ ಕೊರತೆಗೆ ಕಾರಣವಾಗುವ ಇತರ ಖನಿಜಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
ನೆನೆಸಿದ ಮಾವಿನ ಹಣ್ಣನ್ನು ತಿನ್ನುವುದರಿಂದ ಮೊಡವೆ, ಚರ್ಮದ ಸಮಸ್ಯೆಗಳು, ತಲೆನೋವು, ಮಲಬದ್ಧತೆ ಮತ್ತು ಇತರ ಕರುಳಿನ ಸಮಸ್ಯೆಗಳನ್ನು ತಡೆಯಬಹುದು. ವಿಶೇಷವಾಗಿ ಮಕ್ಕಳಿಗೆ ಮಾವು ಸೇವನೆಯಿಂದ ಅತಿಸಾರ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರಿನಲ್ಲಿ ನೆನೆಸಿ ಬಳಿಕ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಕೂಡ ತಡೆಯಬಹುದು.