
ಮನೆಯಲ್ಲಿ 10 ವರ್ಷದ ಒಳಗಿನ ಮಕ್ಕಳಿದ್ದರೆ ಏನಾದರೂ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದರಲ್ಲೂ ಈಗಷ್ಟೇ ಒಂದೊಂದೇ ಪದಗಳನ್ನು ಜೋಡಿಸಿಕೊಂಡು ವಾಕ್ಯ ಮಾಡುವುದಕ್ಕೆ ಶುರು ಮಾಡಿದ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಕೇಳಿದನ್ನೇ ಮತ್ತೆ ಮತ್ತೆ ಕೇಳುತ್ತಲೇ ಇರುತ್ತಾರೆ.
ಅವರಿಗೆ ಎಲ್ಲವೂ ಹೊಸದರಂತೆ ಕಾಣುತ್ತದೆ. ಕೆಲವೊಮ್ಮೆ ನಾವು ಹೇಳಿದ್ದು ಅವರಿಗೆ ಅರ್ಥವಾಗದೇ ಇರಬಹುದು, ಇನ್ನು ಕೆಲವೊಮ್ಮೆ ಅಮ್ಮನ ಪೂರ್ತಿ ಗಮನ ತನ್ನತ್ತಲೇ ಇರಬೇಕು ಎಂಬ ಭಾವದಿಂದ ಮತ್ತದೇ ಪ್ರಶ್ನೆ ಕೇಳುತ್ತಿರುತ್ತಾರೆ. ನಮಗೆ ಇದು ಕಿರಿ ಕಿರಿ ಅನಿಸಿದರೂ ಅವರಿಗೆ ಬೈಯುವುದು ಸರಿಯಲ್ಲ. ಆದಷ್ಟು ಪ್ರೀತಿಯಿಂದ ಅವರಿಗೆ ಅರ್ಥ ಮಾಡುವುದಕ್ಕೆ ಪ್ರಯತ್ನಿಸಬೇಕು.
ಇನ್ನು ಕೆಲವರು ಎಷ್ಟು ಸಲ ಕೇಳಿದ್ದನ್ನೇ ಕೇಳುತ್ತಿಯಾ ಸ್ವಲ್ಪ ಬಾಯಿ ಮುಚ್ಚು ಎನ್ನುತ್ತಾರೆ. ಇದು ಕೂಡ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅವರು ಮಾತನಾಡಿದರೆ ಎಲ್ಲಿ ಬೈಯುತ್ತಾರೋ ಎಂಬ ಭಯದಿಂದ ತಮಗೆ ಅನಿಸಿದ್ದನ್ನು ಹೇಳದೇ ಇರಬಹುದು. ಹಾಗಾಗಿ ಮಕ್ಕಳು ಮಾತನಾಡುವಾಗ ಆದಷ್ಟು ಅವರ ಮಾತಿಗೆ ಕಿವಿಗೊಡಿ. ಪ್ರೀತಿಯಿಂದ ಅವರಿಗೆ ಅರ್ಥ ಮಾಡಿಸಿ. ಇದರಿಂದ ಅವರ ಪುಟ್ಟ ಮನಸ್ಸು ಕೂಡ ಖುಷಿಯಾಗುತ್ತದೆ.