ಕೊರೊನಾ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಕೋವಿಡ್ ವೈರಸ್‌ನ ಸೋಂಕು ಶೇ.45 ರಷ್ಟು ಮೊಬೈಲ್ ಫೋನ್‌ಗಳಿಂದ ಹರಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಜನರು ಮೊಬೈಲ್‌ನ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದೇ ಇರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಫೋನ್‌ಗಳನ್ನು ಹೆಚ್ಚು ಬಳಸಲಾಗಿದೆ. ಈ ಕಾರಣದಿಂದಾಗಿ ಸೋಂಕು ಕೂಡ ವಿಪರೀತವಾಗಿ ಹರಡಿತ್ತು.
ಸಂಶೋಧನಾ ವರದಿ ಏನು ಹೇಳುತ್ತದೆ..?
ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದ ಸಂಶೋಧಕರು 10 ದೇಶಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಕುರಿತು 15 ಅಧ್ಯಯನಗಳನ್ನು ನಡೆಸಿದ್ದಾರೆ. 2019 ರಿಂದ 2023 ರವರೆಗೆ ಆಸ್ಪತ್ರೆಯಲ್ಲಿ ಬಳಸಲಾದ ಮೊಬೈಲ್‌ಗಳನ್ನೂ ಪರೀಕ್ಷಿಸಲಾಯ್ತು. ಈ ಸಮಯದಲ್ಲಿ 45 ಪ್ರತಿಶತ ಫೋನ್‌ಗಳು ಕೋವಿಡ್ -19 ವೈರಸ್ ಅನ್ನು ಒಳಗೊಂಡಿದ್ದವು ಎಂಬುದು ಈ ವೇಳೆ ದೃಢಪಟ್ಟಿದೆ.
ಸಿಡ್ನಿಯಲ್ಲಿ ಸಹ, ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ ಅರ್ಧದಷ್ಟು ಮೊಬೈಲ್ ಫೋನ್‌ಗಳು ಕರೋನಾ ವೈರಸ್‌ನಿಂದ ಕಲುಷಿತಗೊಂಡಿದ್ದವು. 511 ಫೋನ್‌ಗಳ ಪೈಕಿ 231 ಅಂದರೆ 45 ಪ್ರತಿಶತ ಫೋನ್‌ಗಳಲ್ಲಿ ಕೊರೊನಾ ವೈರಸ್ ಕಂಡುಬಂದಿದೆ. ಮೊಬೈಲ್ ಫೋನ್‌ಗಳು ಕರೋನಾವನ್ನು ಹರಡಬಹುದು ಎಂಬುದು ಈ ಮೂಲಕ ಖಚಿತವಾಗಿದೆ. ಈ ವರದಿಯನ್ನು ಜರ್ನಲ್ ಆಫ್ ಇನ್ಫೆಕ್ಷನ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿಯೂ ಪ್ರಕಟಿಸಲಾಗಿದೆ.
ಮೊಬೈಲ್ ಫೋನ್‌ನಲ್ಲಿ ಕರೋನಾ ವೈರಸ್ ಎಷ್ಟು ಕಾಲ ಬದುಕುತ್ತದೆ ?
ಲಾಕ್‌ಡೌನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆಯ ಹೊರತಾಗಿಯೂ ಕೊರೊನಾ ವೈರಸ್ ವೇಗವಾಗಿ ಹರಡಿತ್ತು. ಇದರಲ್ಲಿ ಮೊಬೈಲ್ ಫೋನ್‌ಗಳ ಪಾತ್ರ ದೊಡ್ಡದು. SARS-Cov-2 ವೈರಸ್ ಯಾವುದೇ ಮೊಬೈಲ್ ಫೋನ್‌ಗಳ ಸ್ಕ್ರೀನ್ ಅಂದರೆ ಗಾಜಿನ ಮೇಲೆ 28 ದಿನಗಳವರೆಗೆ ಬದುಕಬಲ್ಲದು ಎಂಬುದು ಈಗಾಗ್ಲೇ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಪ್ರಸ್ತುತ ಜಗತ್ತಿನಲ್ಲಿ 7 ಬಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತಿದೆ. ಎಷ್ಟೇ ಬಾರಿ ಕೈ ತೊಳೆದರೂ ಮೊಬೈಲ್ ಸ್ಪರ್ಶಿಸಿದ ತಕ್ಷಣ ವೈರಸ್ ಸೋಂಕು ತಗುಲುತ್ತದೆ. ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕ ಮತ್ತು ಮಕ್ಕಳ ಐಸಿಯು ವಾರ್ಡ್‌ಗಳಲ್ಲಿ ನಡೆಸಿದ ಅಧ್ಯಯನವು 26 ಆರೋಗ್ಯ ವೃತ್ತಿಪರರ ಮೊಬೈಲ್ ಫೋನ್‌ಗಳಲ್ಲಿ 11,163 ರೋಗಕಾರಕಗಳನ್ನು ಕಂಡುಹಿಡಿದಿದೆ. ಇದರಲ್ಲಿ ವೈರಸ್‌ಗಳು ಮತ್ತು ಪ್ರತಿಜೀವಕ-ನಿರೋಧಕ ಬ್ಯಾಕ್ಟೀರಿಯಾಗಳು ಸಹ ಕಂಡುಬಂದಿವೆ.
ಸೋಂಕಿನಿಂದ ಫೋನ್ ದೂರವಿಡುವುದು ಹೇಗೆ ?
ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸಲು, ಕನಿಷ್ಠ 70 ಪ್ರತಿಶತದಷ್ಟು ಆಲ್ಕೋಹಾಲ್ ಹೊಂದಿರುವ ವೈಪ್‌ಗಳು ಅಥವಾ ಸ್ಪ್ರೇ ಅನ್ನು ಬಳಸಬೇಕು.
ಮನೆಯಿಂದ ಹೊರಗೆ ಹೋಗುವಾಗ, ಫೋನ್ ಅನ್ನು ನಿಮ್ಮ ಪಾಕೆಟ್, ಪರ್ಸ್ ಅಥವಾ ಕಾರಿನಲ್ಲಿ ಇರಿಸಿ. ಶಾಪಿಂಗ್ ಮಾಡುವಾಗ, ಮೊಬೈಲ್ ಫೋನ್ ಬಳಸಬೇಡಿ. ಕೈಯಿಂದ ಕಾಗದದ ಮೇಲೆ ಬರೆಯುವ ಮೂಲಕ ಲಿಸ್ಟ್ ಮಾಡಿಕೊಳ್ಳಿ. ಕ್ರೆಡಿಟ್-ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿ, ಮೊಬೈಲ್ ಬಳಸಬೇಡಿ.
ಕೈಗಳನ್ನು ತೊಳೆದು ಅಥವಾ ಶುಚಿಗೊಳಿಸಿದ ನಂತರ ಅಥವಾ ಗ್ಲೌಸ್ ತೆಗೆದ ನಂತರವೇ ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಬಳಸಿ. ಕರೆ ಮಾಡುವಾಗ ಹ್ಯಾಂಡ್ಸ್-ಫ್ರೀ ಸಾಧನವನ್ನು ಮಾತ್ರ ಬಳಸುವುದು ಉತ್ತಮ.