ಜೈಲು ಶಿಕ್ಷೆ ಅನುಭವಿಸುವಾಗಲೇ ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ಸಜಾಬಂಧಿಗೆ ಅವಕಾಶ ನೀಡಿದ್ದ ಹೈಕೋರ್ಟ್ ಈಗ ಸಂತಾನ ಭಾಗ್ಯ ಪಡೆಯಲು ಪೆರೋಲ್ ಮಂಜೂರು ಮಾಡಿದೆ.
ಪತ್ನಿಯ ಮನವಿಗೆ ಸ್ಪಂದಿಸಿದ ಹೈಕೋರ್ಟ್ 30 ದಿನಗಳ ಕಾಲ ಪತಿಯ ಜೊತೆಗೆ ವಾಸಕ್ಕೆ ಅವಕಾಶ ನೀಡಿದೆ. ಸಂಸಾರಿಕ ಜೀವನ ನಡೆಸಿ ಸಂತಾನ ಪಡೆಯಲು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಪ್ರಕರಣದ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೋಲಾರದ ಆನಂದ ಎಂಬಾತನಿಗೆ ಜೂನ್ 5 ರಿಂದ 30 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಂತಾನ ಪಡೆಯಲು ಸಜಾ ಬಂಧಿ ಆಗಿರುವ ತನ್ನ ಪತಿ ಆನಂದನನ್ನು 90 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಜೈಲು ಅಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಕೋರಿ ಆತನ ಪತ್ನಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ಅರ್ಜಿಯನ್ನು ಪುರಸ್ಕರಿಸಿದೆ.
ಪೆರೋಲ್ ಮೇಲೆ ಬಿಡುಗಡೆ ಮಾಡಲು ಸೂಚಿಸಿದ್ದು, ಅವಧಿಯಲ್ಲಿ ಆನಂದ್ ವಾರಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಪೆರೋಲ್ ಷರತ್ತುಗಳನ್ನು ಪಾಲಿಸಿದಲ್ಲಿ ಅದರ ಆಧಾರದ ಮೇಲೆ ಮತ್ತೆ 60 ದಿನ ಪೆರೊಲ್ ವಿಸ್ತರಣೆಗೆ ಆನಂದ್ ಮತ್ತು ಅರ್ಜಿದಾರರು ಕೋರಬಹುದು ಎಂದು ನಿರ್ದೇಶನ ನೀಡಿದೆ.