ವ್ಯಕ್ತಿಯೊಬ್ಬ ಧರ್ಮದ ದೂಷಣೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಿ ಠಾಣೆಯಲ್ಲಿ ಇಟ್ಟಿದ್ದ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಗುಂಪು ಅಲ್ಲಿಗೆ ನುಗ್ಗಿ ಆತನನ್ನು ಹೊರ ತಂದ ಬಳಿಕ ವಿವಸ್ತ್ರಗೊಳಿಸಿ ನಡು ರಸ್ತೆಯಲ್ಲೇ ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಘಟನೆ ಕುರಿತಂತೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಾರ್ಬರ್ಟನ್ ನ ನಾನ್ಖಾನಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಕಸ್ಟಡಿಯಲ್ಲಿದ್ದ ಆರೋಪಿ ವಾರಿಸ್ ಇಸಾ ಎಂಬಾತನನ್ನು ಹತ್ಯೆಗೈಯ್ಯಲಾಗಿದೆ. ಈತ ಧರ್ಮಕ್ಕೆ ಅವಹೇಳನ ಮಾಡಿದ್ದಾನೆ ಎಂಬ ಕಾರಣಕ್ಕೆ ಪೊಲೀಸರು ಆತನನ್ನು ಬಂಧಿಸಿ ಕಸ್ಟಡಿಯಲ್ಲಿಟ್ಟಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಗುಂಪಿನ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಠಾಣಾಧಿಕಾರಿ ಸ್ಥಳದಿಂದ ಓಡಿ ಹೋಗಿದ್ದು, ಬಳಿಕ ಒಳ ನುಗ್ಗಿದ ಗುಂಪು ಆರೋಪಿಯನ್ನು ಹೊರಗೆ ಎಳೆದು ತಂದಿದ್ದಾರೆ. ನಂತರ ಆತನನ್ನು ವಿವಸ್ತ್ರಗೊಳಿಸಿ ದಾರಿಯುದ್ದಕ್ಕೂ ಥಳಿಸುತ್ತಾ ಮೆರವಣಿಗೆ ಮಾಡಲಾಗಿದೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ತನಿಖೆಗೆ ಆದೇಶಿಸಿದ್ದಾರೆ.