ಉತ್ತರಪ್ರದೇಶದ ನೋಯ್ಡಾದಲ್ಲಿ ಇನ್ಮುಂದೆ ಸಾಕುಪ್ರಾಣಿಗಳು ಸಾರ್ವಜನಿಕರನ್ನು ಕಚ್ಚಿದರೆ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಈ ವಾರ ನೋಯ್ಡಾ ಪ್ರಾಧಿಕಾರವು ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳಲ್ಲಿ ಇಂತಹ ನಿಯಮ ತರಲಾಗಿದೆ. ಸಭೆಯಲ್ಲಿ ಸಾಕುಪ್ರಾಣಿಗಳ ನೋಂದಣಿಗೆ ಸಂಬಂಧಿಸಿದಂತೆ ಹಲವಾರು ನೀತಿಗಳನ್ನು ಅಳವಡಿಸಿಕೊಳ್ಳಲಾಯಿತು ಮತ್ತು ಸಾಕುಪ್ರಾಣಿಗಳು ಯಾರನ್ನಾದರೂ ಕಚ್ಚಿದರೆ ದಂಡ ವಿಧಿಸುವ ಬಗ್ಗೆ ನಿರ್ಧರಿಸಲಾಗಿದೆ.
ಇತ್ತೀಚಿಗೆ ನೋಯ್ಡಾದ ವಿವಿಧೆಡೆ ಬೀದಿ ನಾಯಿಗಳು ಮತ್ತು ಸಾಕುಪ್ರಾಣಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದ ನಂತರ ಪ್ರಾಣಿ ಪ್ರೇಮಿಗಳು ಮತ್ತು ನಿವಾಸಿಗಳ ನಡುವೆ ಸಂಘರ್ಷ ಶುರುವಾಯಿತು. ನೋಯ್ಡಾದ ಸೆಕ್ಟರ್ 100 ರಲ್ಲಿನ ರಸ್ತೆ ನಿರ್ಮಾಣ ಸ್ಥಳದಲ್ಲಿ ತನ್ನ ಪೋಷಕರು ಕೆಲಸ ಮಾಡುತ್ತಿದ್ದಾಗ ಬೀದಿ ನಾಯಿಯೊಂದು ಶಿಶುವನ್ನು ಮಾರಣಾಂತಿಕವಾಗಿ ಕೊಂದುಹಾಕಿದ ದುರಂತದಿಂದ ನಿಯಮಗಳನ್ನು ತರಲಾಗಿದೆ.
ನೋಯ್ಡಾ ನಿವಾಸಿಗಳು ತಮ್ಮ ಸಾಕು ಬೆಕ್ಕುಗಳು ಮತ್ತು ನಾಯಿಗಳನ್ನು ನೋಯ್ಡಾ ಪ್ರಾಧಿಕಾರದ ಪೆಟ್ ನೋಂದಣಿ ಅಪ್ಲಿಕೇಶನ್- NAPR ನಲ್ಲಿ ಫೆಬ್ರವರಿ 1, 2023 ರ ಮೊದಲು ವಾರ್ಷಿಕ ಶುಲ್ಕ 500 ರೂ. ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಅವರು ತಮ್ಮ ಸಾಕುಪ್ರಾಣಿಗಳಿಗೆ ಮಾರ್ಚ್ 1, 2023 ರೊಳಗೆ ರೇಬೀಸ್ಗೆ ಲಸಿಕೆ ಹಾಕಿಸಬೇಕು. ಪ್ರತಿ ತಿಂಗಳ ವಿಳಂಬಕ್ಕೆ 2,000 ರೂ. ದಂಡ ಕಟ್ಟಬೇಕಾಗುತ್ತದೆ.
ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿಗಳು ಮಲವಿಸರ್ಜನೆ ಮಾಡಿದರೆ ಅವುಗಳ ಮಾಲೀಕರು ಅವುಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಯಾರನ್ನಾದರೂ ಸಾಕುಪ್ರಾಣಿಗಳು ಕಚ್ಚಿದರೆ ಅದಕ್ಕೆ 10 ಸಾವಿರ ರೂ. ದಂಡ ಹಾಕಲಾಗುತ್ತದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಅಧಿಕಾರಿಗಳು ತಕ್ಷಣವೇ ಈ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಖಚಿತಪಡಿಸಿದ್ದಾರೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಇಬ್ಬರು ಸಾಕುಪ್ರಾಣಿ ಮಾಲೀಕರಿಗೆ ಈಗಾಗಲೇ 10,000 ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಅವರ ನಾಯಿಗಳು ಮಕ್ಕಳನ್ನು ಕಚ್ಚಿದ ನಂತರ ಚಿಕಿತ್ಸೆಯ ವೆಚ್ಚವನ್ನು ಪಾವತಿಸಲು ಸೂಚಿಸಲಾಗಿದೆ.