ತೆರಿಗೆಗಳ ವಸೂಲಾತಿಗೆ ಮುಂದಾಗಿರುವ ಮಧ್ಯ ಪ್ರದೇಶ ಸರ್ಕಾರದ ವಿವಿಧ ಇಲಾಖೆಗಳು, ಸರಿಯಾಗಿ ತೆರಿಗೆ ಪಾವತಿ ಮಾಡದೇ ಇರುವ ಮಂದಿಯಿಂದ ವಸೂಲು ಮಾಡಲು ವಿಶಿಷ್ಟವಾದ ಮಾರ್ಗಗಳನ್ನು ಕಂಡುಕೊಂಡಿವೆ.
ಸುಸ್ಥಿದಾರರಿಗೆ ಸೇರಿದ ಬೈಕುಗಳು, ನೀರಿನ ಪಂಪ್‌ಗಳು, ಟ್ರಾಕ್ಟರ್‌ಗಳು ಹಾಗೂ ಎಮ್ಮೆಗಳನ್ನೂ ಸಹ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಇಂಥದ್ದೇ ಕ್ರಮವೊಂದರಲ್ಲಿ ಗ್ವಾಲಿಯರ್ ಪುರಸಭೆ (ಜಿಎಂಸಿ) ಡೈರಿ ನಿರ್ವಹಕರೊಬ್ಬರ ಬಳಿ ಇದ್ದ ಎಮ್ಮೆಯನ್ನು ವಶಕ್ಕೆ ಪಡೆದ ಘಟನೆ ಜರುಗಿದೆ.
ಹವ್ಯಾಸೀ ಸುಸ್ಥಿದಾರರಿಂದ ಆಸ್ತಿ, ನೀರು ಹಾಗೂ ವಿದ್ಯುತ್ ತೆರಿಗೆಗಳನ್ನು ವಸೂಲು ಮಾಡುವ ಉದ್ದೇಶದಿಂದ ಅವರಿಗೆ ಸೇರಿದ ಸಣ್ಣ ಪುಟ್ಟ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲು ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗ್ವಾಲಿಯರ್ ನಗರದ ಡಾಲಿಯಾನ್ ವಾಲಾ ಪ್ರದೇಶದ ನಿವಾಸಿ ಬಲ್ಕಿಶನ್ ಪಾಲ್‌ಗೆ 1.39 ಲಕ್ಷ ರೂ.ಗಳಷ್ಟಿರುವ ನೀರಿನ ತೆರಿಗೆ ಪಾವತಿ ಮಾಡಲು ಪಾಲಿಕೆಯ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ ನೋಟಿಸ್ ಕಳುಹಿಸಿತ್ತು.
ಈ ವಿಚಾರವಾಗಿ ಪದೇ ಪದೇ ನೋಟಿಸ್ ಕಳುಹಿಸಿದರೂ ಅದನ್ನು ನಿರ್ಲಕ್ಷಿಸಿಕೊಂಡೇ ಬಂದಿದ್ದರು ಬಲ್ಕಿಶನ್. ಆದರೆ ಕೊನೆಯ ನೋಟಿಸ್ ಕಳುಹಿಸಿದಾಗಲೂ ಇದೇ ನಡೆ ಅನುಸರಿಸಿದ ಕಾರಣ ಆತನ ಎಮ್ಮೆಯನ್ನು ವಶಕ್ಕೆ ಪಡೆಯಲು ಪಿಎಚ್‌ಇ ಸಿಬ್ಬಂದಿ ಮುಂದಾಗಿದ್ದಾರೆ.