ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ನೋಟಾ ಅಥವಾ ಮೇಲಿನ ಯಾವುದೂ ಅಲ್ಲ ಗುರುತಿಗೆ 2,02,212 ಜನ ಮತ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಅವರು 11,60,627 ಮತಗಳನ್ನು ಗಳಿಸಿದ್ದಾರೆ. ಸುಮಾರು 10 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಕ್ಷಯಕಾಂತಿ ಬಾಮ್ ಅವರು ಏಪ್ರಿಲ್ 29 ರಂದು ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯಾ ಮತ್ತು ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಇಂದೋರ್ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡ ನಂತರ ಕಾಂಗ್ರೆಸ್ ನೋಟಾಗೆ ಮತ ಹಾಕುವಂತೆ ಜನರಿಗೆ ಕರೆ ನೀಡಿತ್ತು. ಬಾಮ್ ನಂತರ ಬಿಜೆಪಿ ಸೇರಿದರು. ಹಾಲಿ ಸಂಸದ ಶಂಕರ್ ಲಾಲ್ವಾನಿ ಪುನರಾಯ್ಕೆಯಾಗಿದ್ದಾರೆ.
ಇನ್ನೂ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವ ಬದಲು ಮಧ್ಯಪ್ರದೇಶ ಕಾಂಗ್ರೆಸ್ ನೋಟಾ ಪರ ಮತ ಹಾಕಲು ಕರೆ ನೀಡಿತ್ತು.
ನೋಟಾ ಮತದಾರರಿಗೆ ಒಂದು ಕ್ಷೇತ್ರದಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯನ್ನು ನೀಡುತ್ತದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಅವರು ನೋಟಾವನ್ನು ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹಣ ಮತ್ತು ಜನರನ್ನು ಬಳಸಿದ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ನೋಟಾ 13.62% ಪಾಲನ್ನು ಹೋಲಿಸಿದರೆ ಶಂಕರ್ ಲಾಲ್ವಾನಿ ಅವರು 78.99% ಮತಗಳನ್ನು ಪಡೆದಿದ್ದಾರೆ. ಬಹುಜನ ಸಮಾಜ ಪಕ್ಷದ ಸಂಜಯ್ 49,277 ಮತ ಪಡೆದು ಮೂರನೇ ಅತಿ ಹೆಚ್ಚು ಮತಗಳನ್ನು (3.29%) ಪಡೆದರು.
ಇಂದೋರ್ ನಲ್ಲಿ ಮೇ 13 ರಂದು ಮತದಾನ ನಡೆಯಿತು. 25.27 ಲಕ್ಷ ಮತದಾರರಲ್ಲಿ 61.75% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ನೋಟಾ ಮತಗಳು 51,660 ದಾಖಲಾಗಿದ್ದು, ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡ 5ರಷ್ಟು ಮತದಾನವಾಗಿದೆ ಎಂದು ಹೇಳಲಾಗಿದೆ.