ಕೋವಿಡ್- 19 ನಿಂದ ಪೋಷಕರನ್ನು ಕಳೆದುಕೊಂಡಿದ್ದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಐವರು ಒಡಹುಟ್ಟಿದ ಮಕ್ಕಳು ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಿ ಜೀವನೋಪಾಯ ನಡೆಸುತ್ತಿರುವ ಹೃದಯ ವಿದ್ರಾವಕ ದೃಶ್ಯವು ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಕಂಡುಬಂದಿದೆ.
ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರಲ್ಲಿ ಅತ್ಯಂತ ಕಿರಿಯ ಮಗು 7 ತಿಂಗಳ ಪ್ರಾಯದ್ದಾಗಿದ್ದರೆ ಹಿರಿಯ ಮಗು 10 ವರ್ಷ ಪ್ರಾಯದ್ದಾಗಿದೆ. ಈ ಮಕ್ಕಳಿಗೆ ವಾಸಿಸಲು ಸರಿಯಾಗಿ ಮನೆ ಕೂಡ ಇಲ್ಲ. ಈ ಮಕ್ಕಳು ಸ್ಮಶಾನದ ಸಮೀಪವಿರುವ ಮೈದಾನದ ಬಳಿ ಇರುವ ಪಾಳು ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಮಳೆ ಬಂದಾಗೆಲ್ಲ ಮೈದಾನದ ಶೆಡ್ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ಅನಾಥ ಮಕ್ಕಳ ತಂದೆ ರಾಘವೇಂದ್ರ ವಾಲ್ಮೀಕಿ ಫೆಬ್ರವರಿ ತಿಂಗಳಲ್ಲಿ ಮೃತರಾಗಿದ್ದರೆ ತಾಯಿ ಗಿರಿಜಾ ಜೂನ್ ತಿಂಗಳಲ್ಲಿ ಸಾವನ್ನಪ್ಪಿದ್ದರು. ಇಬ್ಬರೂ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುವ ದುರ್ಗತಿ ಬಂದಿದೆ.
ತಮ್ಮ ಕಷ್ಟದ ಬಗ್ಗೆ ಮಾತನಾಡಿದ ಹಿರಿಯ ಸಹೋದರಿ ನಿಶಾ, ಕೊರೊನಾದಿಂದಾಗಿ ನಮ್ಮ ಪೋಷಕರು ಸಾವನ್ನಪ್ಪಿದ್ದಾರೆ. ನಮಗೆ ತಿನ್ನಲು ಏನೂ ಇಲ್ಲ. ಗ್ರಾಮಸ್ಥರಿಂದ ನಿತ್ಯ ಆಹಾರ ಹಾಗೂ ಹಾಲನ್ನು ಪಡೆದುಕೊಳ್ಳುತ್ತೇವೆ. ಗ್ರಾಮಸ್ಥರೇ ನಮಗೆ ಬಟ್ಟೆಯನ್ನೂ ನೀಡಿದ್ದಾರೆ. ಸರ್ಕಾರವು ನಮಗೆ ಸೂರನ್ನು ನೀಡಬೇಕು. ಅಲ್ಲದೇ ಆಹಾರ, ಬಟ್ಟೆಯಂತಹ ಮೂಲ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದ್ದಾಳೆ.
ಪೋಷಕರ ನಿಧನದ ಬಳಿಕ ಈ ಮಕ್ಕಳಿಗೆ 10 ವರ್ಷ ಪ್ರಾಯದ ನಿಶಾಳೇ ತಾಯಿ- ತಂದೆಯಾಗಿದ್ದಾಳೆ. ಈ ಮಕ್ಕಳ ತಾತ ಇದೇ ಗ್ರಾಮದಲ್ಲಿದ್ದಾರೆ. ಆದರೆ ಆತ ಮೊಮ್ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಮಕ್ಕಳ ಬಳಿ ಯಾವುದೇ ಐಡಿ ಪ್ರೂಫ್ ಇಲ್ಲದ ಕಾರಣ ಸರ್ಕಾರ ಸೌಲಭ್ಯಗಳು ಸಹ ಕೈಸೇರವುದು ವಿಳಂಬವಾಗಿದೆ .