ನವದೆಹಲಿ: ಸಾಮಾನ್ಯವಾಗಿ ಬಳಸುವ ಎಂಟು ಔಷಧಿಗಳ ಬೆಲೆಯನ್ನು ಹೆಚ್ಚಿಸುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಇತ್ತೀಚಿನ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
8 ಅಗತ್ಯ ಔಷಧಿಗಳ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರದ ಹಿಂದಿನ ಕಾರಣವೇನು ಎಂದು ಅವರು ಪ್ರಶ್ನಿಸಿದ್ದು, ಈ ಬಗ್ಗೆ ನಿರ್ಣಯಿಸಲು ಸ್ವತಂತ್ರ ಪರಿಶೀಲನಾ ಸಮಿತಿಯನ್ನು ಸ್ಥಾಪಿಸುವಂತೆ ಕೋರಿದ್ದಾರೆ. ಸಾಮಾನ್ಯವಾಗಿ ಬಳಸುವ ಎಂಟು ಔಷಧಿಗಳ ಸೀಲಿಂಗ್ ಬೆಲೆಯನ್ನು ಶೇ.50 ರಷ್ಟು ಹೆಚ್ಚಿಸುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಇತ್ತೀಚಿನ ನಿರ್ಧಾರದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಈ ಬೆಲೆ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಅತ್ಯಗತ್ಯವಾಗಿರುವ ಆಸ್ತಮಾ, ಕ್ಷಯ, ಬೈಪೋಲಾರ್ ಡಿಸಾರ್ಡರ್ ಮತ್ತು ಗ್ಲುಕೋಮಾದಂತಹ ಕಾಯಿಲೆಗಳಿಗೆ ಪಡೆಯುವ ಪ್ರಮುಖ ಔಷಧಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಅನೇಕ ರೋಗಿಗಳು ಮತ್ತು ಅವರ ಕುಟುಂಬಗಳು ಈಗಾಗಲೇ ಅಗತ್ಯ ಚಿಕಿತ್ಸೆಗಳನ್ನು ಪ್ರವೇಶಿಸುವಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಔಷಧದ ಬೆಲೆಯಲ್ಲಿನ ಹಠಾತ್ ಹೆಚ್ಚಳವು ಈ ವ್ಯಕ್ತಿಗಳ ಮೇಲೆ ಹೆಚ್ಚುವರಿ ಹೊರೆ ಉಂಟು ಮಾಡತ್ತದೆ. ಹೀಗಾಗಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.