ರಾಜಸ್ಥಾನದ ಜೈಪುರದಲ್ಲಿ ಒಬ್ಬ ಮಹಿಳೆ ಮೆಟ್ಟಿಲಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ಮನೆಯವರು ಹೇಳಿಕೊಂಡಿದ್ದರಾದರೂ ನಂತರ ಬಹಿರಂಗವಾದ ವಿಡಿಯೋಗಳಲ್ಲಿ ಆಕೆ ತನ್ನ ಪತಿ ಮನೆಯರಿಂದ ಕಿರುಕುಳಕ್ಕೊಳಗಾಗುತ್ತಿದ್ದಳು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಮುಸ್ಕಾನ್ ಜೈನ್ ಎಂಬ ಈ ಮಹಿಳೆ ನಗರದ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಜನವರಿ 16 ರಂದು ಅವರು ಮೆಟ್ಟಿಲಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ಆಕೆಯ ಪತಿ ಮನೆಯವರು ಹೇಳಿದ್ದರು.
ಮುಸ್ಕಾನ್ ಸಾವಿನ ನಾಲ್ಕು ದಿನಗಳ ನಂತರ, ಆಕೆಯ ತಂದೆ ಸೈಬರ್ ತಜ್ಞರ ಸಹಾಯದಿಂದ ಅವರ ಮೊಬೈಲ್ ಫೋನ್ ಅನ್ನು ಅನ್‌ಲಾಕ್ ಮಾಡಿಸಿದ್ದು, ಫೋನ್‌ನಲ್ಲಿ ಮುಸ್ಕಾನ್ ರೆಕಾರ್ಡ್ ಮಾಡಿದ ನಾಲ್ಕು ವಿಡಿಯೋಗಳು ಪತ್ತೆಯಾಗಿವೆ.
ಒಂದು ವಿಡಿಯೋದಲ್ಲಿ, ತುಂಬಾ ದುಃಖಿತಳಾಗಿರುವ ಮುಸ್ಕಾನ್ ತನ್ನ ಪತಿ ಮತ್ತವನ ಕುಟುಂಬಸ್ಥರಿಂದ ತೀವ್ರ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.
“ಕಳೆದ ಎರಡು ವರ್ಷಗಳಿಂದ ನನ್ನ ಪತಿ ಮತ್ತವನ ಕುಟುಂಬಸ್ಥರು ನನ್ನನ್ನು ನರಕಕ್ಕೆ ಹಾಕಿದ್ದಾರೆ. ನನ್ನ ಗಂಡ ಇಷ್ಟೊಂದು ಕೆಟ್ಟವನಾಗುತ್ತಾನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ……” ಎಂದು ಅವರು ಒಂದು ಕ್ಲಿಪ್‌ನಲ್ಲಿ ಹೇಳಿದ್ದಾರೆ.
ಈ ವಿಡಿಯೋಗಳು ಬಹಿರಂಗವಾದ ನಂತರ, ಮುಸ್ಕಾನ್ ತಂದೆ, ಮಗಳ ಸಾವು ಆಕಸ್ಮಿಕವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಆಕೆಯ ಗಂಡ ಪ್ರಿಯಾಂಶ್ ಶರ್ಮಾ ಮತ್ತು ಅವನ ಪೋಷಕರಾದ ನಿರ್ಮಲ್ ಶರ್ಮಾ ಮತ್ತು ಮೀತು ಶರ್ಮಾ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಸ್ಕಾನ್ ಮತ್ತು ಪ್ರಿಯಾಂಶ್ ಬಾಲ್ಯ ಸ್ನೇಹಿತರು ಮತ್ತು ಶಾಲೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದರು. ಮದುವೆಯಾದ ನಂತರ ಪ್ರಿಯಾಂಶ್ ಮತ್ತು ಅವನ ಕುಟುಂಬದ ಕಿರುಕುಳದಿಂದಾಗಿ ಅವರ ಸಂಬಂಧ ಹದಗೆಟ್ಟಿತ್ತು ಎಂದು ಅವರ ತಂದೆ ಹೇಳಿದ್ದಾರೆ.
“ನಾವು ಎಲ್ಲಾ ಕೋನಗಳನ್ನು ಪರಿಶೀಲಿಸುತ್ತಿದ್ದೇವೆ, ಸಂತ್ರಸ್ಥೆ ಫೋನ್‌ನಿಂದ ಬಂದ ವಿಡಿಯೋಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ಪತ್ತೆಯಾದ ಆಧಾರಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.