ಕೊರೊನಾ ಪ್ರಕರಣಗಳಲ್ಲಿ ಕುಸಿತವಾಗ್ತಿದ್ದಂತೆ ಜನರ ನಿರ್ಲಕ್ಷ್ಯ ಹೆಚ್ಚಾಗಿದೆ. ಇದು ಮತ್ತೊಂದು ಅಪಾಯಕ್ಕೆ ದಾರಿ ಮಾಡಿಕೊಡ್ತಿದೆ. ಬುಧವಾರದ ಕೊರೊನಾ ಸೋಂಕಿನ ಪ್ರಕರಣ ನೋಡ್ತಿದ್ದರೆ ಮುಂದಿನ ದಿನಗಳಲ್ಲಿ ಕೊರೊನಾ ಮತ್ತೆ ಅಪಾಯದ ಮಟ್ಟಕ್ಕೆ ತಲುಪಲಿದೆ ಎಂಬ ಭಯ ಶುರುವಾಗಿದೆ.
ಮಂಗಳವಾರಕ್ಕೆ ಹೋಲಿಸಿದರೆ, ಬುಧವಾರದ ಅಂಕಿಅಂಶಗಳ ಪ್ರಕಾರ, 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,593 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಂಗಳವಾರ 25,467 ಹೊಸ ಪ್ರಕರಣ ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ, 648 ರೋಗಿಗಳು ಸಾವನ್ನಪ್ಪಿದ್ದಾರೆ.
ಒಂದು ದಿನದಲ್ಲಿ 37,593 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾದ ನಂತರ, ದೇಶದಲ್ಲಿ ಸೋಂಕಿತರ ಸಂಖ್ಯೆ 3,25,12,366 ಕ್ಕೆ ಏರಿದೆ. ಅದೇ ಸಮಯದಲ್ಲಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 3,22,327 ಕ್ಕೆ ಏರಿತು. 648 ಜನರ ಸಾವಿನ ನಂತರ, ಸಾವಿನ ಸಂಖ್ಯೆ 4,35,758 ಕ್ಕೆ ಏರಿದೆ. ಪ್ರಸ್ತುತ, ದೇಶದಲ್ಲಿ 3,22,327 ಜನರು ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾದ ಮೂರನೇ ಅಲೆ ಭೀತಿ ನಡುವೆ ಕೊರೊನಾ ಸೋಂಕಿನ ಪ್ರಕರಣಗಳು ಮತ್ತು ಸಾವು ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ,ಅಕ್ಟೋಬರ್‌ನಲ್ಲಿ ಮೂರನೇ ಅಲೆ ಜೋರಾಗಲಿದೆ ಎಂಬ ಎಚ್ಚರಿಕೆ ನೀಡಿದೆ.