ತನ್ನದೇ 4 ವರ್ಷದ ಮಗುವನ್ನ ಗೋವಾದಲ್ಲಿ ಕೊಂದು ಶವದೊಂದಿಗೆ ಬೆಂಗಳೂರಿಗೆ ಬರ್ತಿದ್ದ ಸುಚನಾ ಸೇಠ್ ಕೃತ್ಯದ ಬಗ್ಗೆ ಆಕೆ ಕಲಿತ ಕಾಲೇಜಿನ ಪ್ರಾಧ್ಯಾಪಕರು ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥಾಪಕಿ ಮತ್ತು ಸಿಇಒ ಸುಚನಾ ಸೇಠ್ (39) ಸೋಮವಾರ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಟ್ಯಾಕ್ಸಿ ಬಾಡಿಗೆಗೆ ಪಡೆದು ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಳು. ಸದ್ಯ ಪೊಲೀಸ್ ವಶದಲ್ಲಿರುವ ಆಕೆಯ ಬಗ್ಗೆ ಇಡೀ ದೇಶವೇ ದಂಗಾಗಿದೆ.
ಚೆನ್ನೈನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದ ಸುಚನಾ ಸೇಠ್ ತನ್ನ ಕಾಲೇಜು ದಿನಗಳನ್ನು ಕೋಲ್ಕತ್ತಾದಲ್ಲಿ ಕಳೆದಿದ್ದಳು. ಭವಾನಿಪುರ ಎಜುಕೇಶನ್ ಸೊಸೈಟಿ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪ್ರಥಮ ದರ್ಜೆಯೊಂದಿಗೆ ಪದವಿ ಪಡೆದಿದ್ದಳು. ಇದೀಗ ನಡೆಸಿರುವ ಕೃತ್ಯದ ಬಗ್ಗೆ ಅಲ್ಲಿನ ಭೌತಶಾಸ್ರ್ಲ ಪ್ರಾಧ್ಯಾಪಕ “ನಾನು ಇನ್ನೂ ಆ ಹುಡುಗಿಯನ್ನು ನೆನಪಿಸಿಕೊಳ್ಳಬಲ್ಲೆ. ಅವಳು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅವಳು ದಿ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಸಂಶೋಧನೆಗಾಗಿ ಫೆಲೋಶಿಪ್ ಪಡೆದಿದ್ದಳು ಎಂದು ನನಗೆ ನೆನಪಿದೆ. ಕಾಲೇಜು ವಿದ್ಯಾರ್ಥಿನಿ ಈ ಸಾಧನೆ ಮಾಡುವುದು ಸುಲಭವಲ್ಲ. ಹಾಗಾಗಿ ಈ ಸಾಧನೆ ವಿಶೇಷವಾಗಿತ್ತು” ಎಂದು ಹೇಳಿದ್ದಾರೆ.
ಕಾಲೇಜು ಬಿಟ್ಟ ನಂತರ ಸುಚನಾ ಸೇಠ್ ಮತ್ತೆ ಯಾರನ್ನೂ ಭೇಟಿಯಾಗಲು ಬರಲಿಲ್ಲ ಎಂದು ಮತ್ತೊಬ್ಬ ಪ್ರಾಧ್ಯಾಪಕರು ಹೇಳಿದ್ದಾರೆ. ಆಕೆಗೆ ತನ್ನ ಕಾಲೇಜಿನ ಸ್ನೇಹಿತರು ಮತ್ತು ಪ್ರಾಧ್ಯಾಪಕರೊಂದಿಗೆ ಸಂಪರ್ಕದಲ್ಲಿರಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. “ನಾವು ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘವನ್ನು ಹೊಂದಿದ್ದೇವೆ. ಅಲ್ಲಿ ಹಳೆಯ ವಿದ್ಯಾರ್ಥಿಗಳು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ ಇದುವರೆಗೂ ಸುಚನಾ ನಮ್ಮನ್ನು ಸಂಪರ್ಕಿಸಲಿಲ್ಲ ಅಥವಾ ಈ ಗುಂಪುಗಳಿಗೆ ಪ್ರವೇಶಿಸಲು ಪ್ರಯತ್ನಿಸಲಿಲ್ಲ.” ಎಂದಿದ್ದಾರೆ.
ಬಿ.ಎಸ್ಸಿ ಪದವಿ ನಂತರ ಸುಚನಾ ಸೇಠ್ ತನ್ನ ಸ್ನಾತಕೋತ್ತರ ಪದವಿಗಾಗಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರು ಮಾತನಾಡುತ್ತಾ “ನಾನು 2007-08ರಲ್ಲಿ ಕಲಿಸಿದ ಅದೇ ವಿದ್ಯಾರ್ಥಿನಿ ಅವಳು ಎಂದು ಭಾವಿಸುತ್ತೇನೆ. ಅವಳು ತನ್ನ ಅಧ್ಯಯನದಲ್ಲಿ ಗಮನ ಹರಿಸುತ್ತಿದ್ದಳು. ಅವಳು ಅಂತಹ ಘೋರ ಅಪರಾಧವನ್ನು ಮಾಡಬಹುದೆಂದು ನನಗೆ ಆಶ್ಚರ್ಯವಾಯಿತು. ಅವಳು ತುಂಬಾ ಚೆನ್ನಾಗಿ ವರ್ತಿಸುತ್ತಿದ್ದಳು.” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಸಮಯದಲ್ಲಿ ಸುಚನಾ ಸೇಠ್ ಉತ್ತಮ ನಡವಳಿಕೆ ಹೊಂದಿದ್ದಳು ಎಂಬುದು ಗೊತ್ತಾಗಿದೆ. ಸುಚನಾ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ನ್ಯಾಷನಲ್ ಟ್ಯಾಲೆಂಡ್ ಸರ್ಚ್ ವಿದ್ಯಾರ್ಥಿವೇತನವನ್ನು ಗೆದ್ದಿದ್ದರು. ಹತ್ತನೇ ತರಗತಿಯಲ್ಲಿ ಸಂಸ್ಕೃತ, ಸಮಾಜ ವಿಜ್ಞಾನ ಮತ್ತು ಇಂಗ್ಲಿಷ್‌ನಲ್ಲಿ CBSE ಮೆರಿಟ್ ಪ್ರಮಾಣಪತ್ರಗಳನ್ನು ಪಡೆದಿದ್ದರು . ಗೋಲ್‌ಪಾರ್ಕ್‌ನ ರಾಮಕೃಷ್ಣ ಮಿಷನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್‌ನಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದರು.