ಉದ್ಯಮಿ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಆದರೆ ಅಂಬಾನಿ ಅವರ ಬಳಿಯಿರುವಷ್ಟು ಸಂಪತ್ತನ್ನು ಮೆಟಾದ ಮಾರ್ಕ್ ಜುಕರ್ ಬರ್ಗ್ ಕೇವಲ ಒಂದು ವರ್ಷದಲ್ಲಿ ಸಂಪಾದಿಸಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ ಕಳೆದ 12 ತಿಂಗಳಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು 112.6 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ. ಮುಖೇಶ್ ಅಂಬಾನಿ ಅವರ ಒಟ್ಟಾರೆ ಸಂಪತ್ತು 116 ಬಿಲಿಯನ್ ಡಾಲರ್‌ನಷ್ಟಿದೆ.
ಇತ್ತೀಚಿನ ದಿನಗಳಲ್ಲಿ ಮೆಟಾ ಷೇರುಗಳ ಮೌಲ್ಯ ಸುಮಾರು 3 ಪಟ್ಟು ಹೆಚ್ಚಾಗಿದೆ. ಹಾಗಾಗಿ ಮಾರ್ಕ್ ಜುಕರ್‌ಬರ್ಗ್ ಅವರ ಸಂಪತ್ತು ಸುಮಾರು 177 ಬಿಲಿಯನ್ ಡಾಲರ್‌ಗೆ ತಲುಪಿದೆ. ಮಾರ್ಕ್ ಜುಕರ್‌ಬರ್ಗ್ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ. ಆದರೆ ಕಳೆದ ವರ್ಷ ಅವರು ಈ ಪಟ್ಟಿಯಲ್ಲಿ 16 ನೇ ಸ್ಥಾನದಲ್ಲಿದ್ದರು. ಕೇವಲ ಒಂದೇ ವರ್ಷದಲ್ಲಿ 12 ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.
ಮೆಟಾದ ಷೇರುಗಳು 2021ರ ದಾಖಲೆಯ ಮಟ್ಟದಿಂದ ಸುಮಾರು 75 ಪ್ರತಿಶತದಷ್ಟು ಕುಸಿದಿತ್ತು. ನಂತರ ಕಂಪನಿಯು ಶೇ.25ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮಾರ್ಕ್ ಜುಕರ್‌ಬರ್ಗ್, ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಭವನವನ್ನು ಮಾರಾಟ ಮಾಡುವ ಮೂಲಕ ಬಂಡವಾಳವನ್ನು ಮರುಸಂಘಟಿಸುತ್ತಿದ್ದಾರೆ ಎನ್ನಲಾಗ್ತಿದೆ. 29.6 ಮಿಲಿಯನ್ ಡಾಲರ್ ಮೌಲ್ಯದ ಭವನವನ್ನು ಮಾರಾಟ ಮಾಡ್ತಿದ್ದಾರಂತೆ.
ಮಾರ್ಚ್ ಆರಂಭದಲ್ಲಿ ನೆದರ್ಲೆಂಡ್ಸ್‌ಗೆ ಭೇಟಿ ನೀಡಿದ್ದ ಅವರು 300 ಮಿಲಿಯನ್ ಡಾಲರ್ ಮೌಲ್ಯದ ವಿಹಾರ ನೌಕೆಯನ್ನು ಖರೀದಿಸಿದ್ದಾರೆ. ಈ ಹಡಗನ್ನು ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್‌ನಲ್ಲಿರುವ ಪೋರ್ಟ್ ಎವರ್‌ಗ್ಲೇಡ್ಸ್‌ನಲ್ಲಿ ಡಾಕ್ ಮಾಡಲಾಗಿದೆ.
ಫೋರ್ಬ್ಸ್ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅವರ ಕುಟುಂಬ ಮೊದಲ ಸ್ಥಾನ ಪಡೆದಿದೆ. ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನವನ್ನು ತಲುಪಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನವು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಅವರ ಪಾಲಾಗಿದೆ. ಅವರ ನಿವ್ವಳ ಮೌಲ್ಯ 195 ಬಿಲಿಯನ್ ಡಾಲರ್‌ಗಳು ಎಂದು ಹೇಳಲಾಗ್ತಿದೆ.
ಈ ಪಟ್ಟಿಯಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್ ಹೆಸರು ಮೂರನೇ ಸ್ಥಾನದಲ್ಲಿದೆ. ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯ 194 ಬಿಲಿಯನ್ ಡಾಲರ್. ಮಾರ್ಕ್ ಜುಕರ್‌ಬರ್ಗ್ ನಾಲ್ಕನೇ ಸ್ಥಾನದಲ್ಲಿದ್ದರೆ, ಲ್ಯಾರಿ ಎಲಿಸನ್ ಐದನೇ ಸ್ಥಾನದಲ್ಲಿದ್ದಾರೆ. ಅವರು ಸಂಪತ್ತು 141 ಬಿಲಿಯನ್ ಡಾಲರ್‌ಗಳಷ್ಟಿದೆ.