ಮುಂಬೈನಲ್ಲಿ ನೆಲೆಸಿರುವ ಉಗಾಂಡಾದಲ್ಲಿ ಜನಿಸಿದ ಮಹಿಳೆ ಇಳಾ ಪೋಪಟ್ (66) ಕಳೆದ ಐದೂವರೆ ದಶಕದಿಂದಲೂ ಭಾರತದ ಪೌರತ್ವಕ್ಕಾಗಿ ಹೋರಾಡುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಪೌರತ್ವ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾಧಿಕಾರಿಯು 2019ರಲ್ಲಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಗಂಗಾಪುರವಾಲಾ ಮತ್ತು ಶ್ರೀರಾಮ್ ಮೋದಕ್ ಅವರು ಆಕೆಯ ದನಿ ಆಲಿಸಿದರು.
ನೀವು ಹುಟ್ಟಿನಿಂದಲೇ ರಾಷ್ಟ್ರ ರಹಿತ ರಾಷ್ಟ್ರೀಯರು. ನೀವು ಯಾವುದೇ ಮಾನ್ಯ ಪಾಸ್ಪೋರ್ಟ್ ಮತ್ತು ವೀಸಾ ಹೊಂದಿಲ್ಲ. ಆದ್ದರಿಂದ ನೀವು ಭಾರತೀಯ ಪೌರತ್ವ ಕಾಯ್ದೆ, 1955ರ ಷರತ್ತನ್ನು ಪೂರೈಸುತ್ತಿಲ್ಲ ಎಂದು ತಿರಸ್ಕಾರ ಮಾಡಿದ್ದಕ್ಕೆ ಕಾರಣ ನೀಡಲಾಗಿದೆ.
ಇಳಾ ಸೆಪ್ಟೆಂಬರ್ 6, 1955ರಂದು ಉಗಾಂಡಾದ ಕಮುಲಿಯಲ್ಲಿ ಜನಿಸಿದ್ದರು. ಆಕೆಯ ಭಾರತೀಯ ಮೂಲದ ಪೋಷಕರು ಬ್ರಿಟಿಷ್ ಪಾಸ್ಪೋರ್ಟ್ ಹೊಂದಿದ್ದರು. ಫೆಬ್ರವರಿ 15, 1966 ರಂದು, ಅಂದರೆ ಆಕೆ 10 ವರ್ಷದವಳಿದ್ದಾಗ, ಅವಳ ಸಹೋದರನೊಟ್ಟಿಗೆ ತನ್ನ ತಾಯಿಯ ಪಾಸ್ಪೋರ್ಟ್ನಲ್ಲಿ ಭಾರತವನ್ನು ಪ್ರವೇಶಿಸಿದ್ದರು.
ಇಳಾ 1977 ರಲ್ಲಿ ಜತಿನ್ ಪೋಪಟ್ ಅವರನ್ನು ವಿವಾಹವಾದರು. ಅವರು 1997, 2008 ರಲ್ಲಿ ಭಾರತೀಯ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದರು, ಈ ವೇಳೆ ಮೊದಲು ಭಾರತೀಯ ಪ್ರಜೆಯಾಗಿ ನೋಂದಾಯಿಸಿಕೊಳ್ಳಲು ಸಲಹೆ ಬಂದಿತು.
ನಂತರ ಅವರು ಮಾರ್ಚ್ 2019 ರಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಿದರು. ಮದುವೆಯ ನಂತರ ಆಕೆ ಭಾರತೀಯ ಪೌರತ್ವಕ್ಕೆ ಅರ್ಹಳಾಗಿದ್ದಾಳೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪೌರತ್ವ ಪಡೆಯಲು ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಏಳು ವರ್ಷಗಳ ಕಾಲ ಭಾರತದ ನಿವಾಸಿಯಾಗಿರಬೇಕು ಎಂದು ಪೌರತ್ವ ಕಾಯ್ದೆ ಹೇಳುತ್ತದೆ. ವಾಸ್ತವವಾಗಿ, ಅರ್ಜಿದಾರರು 1966 ರಿಂದ ನಿರಂತರವಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ. ಪರಿಣಾಮವಾಗಿ, ಅವರು ಭಾರತದ ಪೌರತ್ವಕ್ಕೆ ಅರ್ಹರಾಗಿದ್ದಾರೆ, ಪೋಪಟ್ಗೆ ಆಧಾರ್, ಪ್ಯಾನ್ ಮತ್ತು ಚುನಾವಣಾ ಕಾರ್ಡ್ಗಳನ್ನು ಸಹ ನೀಡಲಾಗಿದೆ ಎಂದು ಅಜಿರ್ಯಲ್ಲಿ ವಿವರಿಸಲಾಗಿತ್ತು.
ಕೇಂದ್ರ ಸರ್ಕಾರದ ವಕೀಲರು ಅಭಿಪ್ರಾಯ ನೀಡಿ 1966ರಿಂದ ವೀಸಾ ಇಲ್ಲದೆ ದೇಶದಲ್ಲಿ ನೆಲೆಸಿದ್ದಾರೆ ಮತ್ತು ಅವರ ಪೌರತ್ವ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೇಳಿದರು. ಆಕೆಯ ಬಳಿ ದಾಖಲೆಗಳಿಲ್ಲದ ಕಾರಣ ಬ್ರಿಟಿಷ್ ಹೈಕಮಿಷನ್ ಪೌರತ್ವಕ್ಕಾಗಿ ಆಕೆಯ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು. ಆಕೆ ಮೊದಲು ಉಗಾಂಡಾದ ರಾಯಭಾರ ಕಚೇರಿಯನ್ನು ಸಂಪಕಿರ್ಸಬೇಕಿತ್ತು ಎಂದರು.