ಬಾಲ್ಕನಿಯಲ್ಲಿ ಬಟ್ಟೆ ಒಣ ಹಾಕುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಕೆಲವರು ಅನಿವಾರ್ಯ ಕಾರಣಕ್ಕೆ ಹೀಗೆ ಮಾಡಿದ್ರೆ ಮತ್ತೆ ಕೆಲವರ ಅಭ್ಯಾಸವಿದು. ಆದ್ರೆ ದುಬೈನಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಹಾಕುವಂತಿಲ್ಲ. ಯಸ್. ಅಲ್ಲಿನ ಆಡಳಿತ ಹೊಸ ನಿಯಮ ಜಾರಿಗೆ ತಂದಿದೆ. ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮಗಳನ್ನು ಮಾಡಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸಬಾರದು ಎಂದು ದುಬೈ ಮುನ್ಸಿಪಾಲಿಟಿ ಹೇಳಿದೆ.
ಇಷ್ಟೇ ಅಲ್ಲ ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದುವವರಿಗೆ ದುಬೈ ಮುನ್ಸಿಪಾಲಿಟಿ ಎಚ್ಚರಿಕೆ ನೀಡಿದೆ. ಯಾರಾದರೂ ಬಾಲ್ಕನಿಯಲ್ಲಿ ಸಿಗರೇಟ್ ಸೇದಿದರೆ ಮತ್ತು ಅದರ ಬೂದಿ ಕೆಳಗೆ ಬಿದ್ದರೆ ದಂಡ ತೆರಬೇಕಾಗುತ್ತದೆ. ಜನರು ತಮ್ಮ ಅಪಾರ್ಟ್ಮೆಂಟ್ ಬಾಲ್ಕನಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಆಡಳಿತ ಜನರಿಗೆ ಮನವಿ ಮಾಡಿದೆ.
ದುಬೈ ಮುನ್ಸಿಪಾಲಿಟಿ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನರು ತಮ್ಮ ಬಾಲ್ಕನಿ ಅಸಹ್ಯವಾಗಿ ಕಾಣುವಂತಹ ಕೆಲಸವನ್ನು ಮಾಡಬಾರದು ಎಂದಿದೆ. ಒಂದು ವೇಳೆ ಅಂಥ ಘಟನೆ ಕಣ್ಣಿಗೆ ಕಂಡರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಆಡಳಿತ ಹೇಳಿದೆ.