ಕೇರಳದಲ್ಲಿ ನಡೆದ ನಾಟಕೀಯ ಘಟನೆಯೊಂದರಲ್ಲಿ ಅಂತರ್ ಧರ್ಮೀಯ ಜೋಡಿ ಮದುವೆಯಾಗುವ ಕೆಲ ಕ್ಷಣಗಳ ಮೊದಲು ವಧುವನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ. ತಿರುವನಂತಪುರಂನ ಕೋವಲಂ ಬಳಿಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಇಡೀ ಘಟನೆಯು ಸಿನಿಮೀಯ ದೃಶ್ಯದಂತೆ ಕಂಡಿದೆ. ತನಗೆ ಹೋಗಲು ಇಷ್ಟವಿಲ್ಲ ಎಂದು ಕಿರುಚುತ್ತಿದ್ದ ವಧುವನ್ನು ಕೋವಲಂ ಪೊಲೀಸ್ ಠಾಣೆಯ ಹೊರಗೆ ಪೊಲೀಸ್ ಸಿಬ್ಬಂದಿ ಖಾಸಗಿ ವಾಹನದ ಒಳಗೆ ತಳ್ಳಿ ಕರೆದೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಸೆರೆಯಾಗಿರುವ ದೃಶ್ಯಾವಳಿಗಳ ಪ್ರಕಾರ ವರನ ಹತ್ತಿರ ಹೋಗದಂತೆ ವಧುವನ್ನ ಪೊಲೀಸರು ತಡೆದಿದ್ದಾರೆ.
ನವಜೋಡಿ ಸೋಮವಾರ ನ್ಯಾಯಾಲಯದ ಮೆಟ್ಟಿಲೇರಿದಾಗ ವಧು ಅಲ್ಫಿಯಾ ತನ್ನ ಸ್ವಂತ ಇಚ್ಛೆಯಿಂದ ವರ ಅಖಿಲ್ ನೊಂದಿಗೆ ಹೋಗಿದ್ದಾಗಿ ಹೇಳಿದ್ದಾಳೆ. ಜೊತೆಗೆ ಆತನೊಂದಿಗೆ ಮದುವೆಯಾಗಿ ಬದುಕಲು ಬಯಸಿದ್ದಾಗಿ ಕೋರ್ಟ್ ಗೆ ತಿಳಿಸಿದಳು. ನನ್ನ ಹೇಳಿಕೆಯನ್ನು ದಾಖಲಿಸಿದ ನಂತರ ಅಖಿಲ್‌ನೊಂದಿಗೆ ಹೊರಡಲು ನನಗೆ ಅವಕಾಶ ನೀಡಲಾಯಿತು ಎಂದು ಮಹಿಳೆ ಸುದ್ದಿವಾಹಿನಿಯೊಂದಕ್ಕೆ ಹೇಳಿದ್ದಾಳೆ.
ಏತನ್ಮಧ್ಯೆ ಆಲಪ್ಪುಳ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕಾಯಂಕುಲಂ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾದ ಬಗ್ಗೆ ದೂರು ದಾಖಲಾಗಿದ್ದು, ಅದರ ಭಾಗವಾಗಿ ಮಹಿಳೆಯನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಯಿತು ಎಂದು ಹೇಳಿದರು.
ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹಾಗಾಗಿ ಅವರು ತಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಿದ್ದರು. ಅವರಿಂದ ಬಲಪ್ರಯೋಗ ನಡೆದ ಬಗ್ಗೆ ತಿಳಿದಿಲ್ಲ. ಹುಡುಗಿ ತಾನು ವರನೊಂದಿಗೆ ಹೋಗಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದಳು ಮತ್ತು ಅವಳು ಅವನೊಂದಿಗೆ ಹೊರಟುಹೋದಳು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮತ್ತೊಂದೆಡೆ ಒಂದು ವರ್ಷದಿಂದ ತನಗೆ ಪರಿಚಯವಿರುವ ಅಖಿಲ್‌ನೊಂದಿಗೆ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗುವುದಾಗಿ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರೂ ಪೊಲೀಸರು ತನ್ನನ್ನು ಕರೆದುಕೊಂಡು ಹೋದರು ಎಂದು ಅಲ್ಫಿಯಾ ಆರೋಪಿಸಿದ್ದಾರೆ.