ಶಿಮ್ಲಾ: ಹಿಮಾಚಲ ಕ್ಯಾಬಿನೆಟ್ ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆಗೆ ಅನುಮೋದನೆ ನೀಡಿದೆ. ತನ್ನ ಚುನಾವಣಾ ಭರವಸೆಯನ್ನು ಈಡೇರಿಸಲು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ಶುಕ್ರವಾರ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಅನುಮೋದನೆ ನೀಡಿದೆ.
ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ಅಡಿಯಲ್ಲಿ ನೌಕರರು ಮತ್ತು ಪಿಂಚಣಿದಾರರು ಸೇರಿದಂತೆ 1.36 ಲಕ್ಷ ಉದ್ಯೋಗಿಗಳಿದ್ದಾರೆ. ಕಾಂಗ್ರೆಸ್ ಪಕ್ಷವು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು(ಒಪಿಎಸ್) ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಅದನ್ನು ಈಡೇರಿಸಲಾಗಿದೆ.
ಹಳೆ ಪಿಂಚಣಿ ಯೋಜನೆಯ ಲಾಭವನ್ನು ಇಂದಿನಿಂದ ನೀಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ನಂತರಸುಖು ತಿಳಿಸಿದ್ದಾರೆ.
ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದ ಅವರು, 1,500 ರೂ. ವಿತರಣಾ ಮಾರ್ಗಸೂಚಿ ತಯಾರಿಸಲು ಚಂದರ್ ಕುಮಾರ್, ಧನಿ ರಾಮ್ ಶಾಂಡಿಲ್, ಅನಿರುದ್ಧ್ ಸಿಂಗ್ ಮತ್ತು ಜಗತ್ ನೇಗಿ ಸೇರಿದಂತೆ ಸಂಪುಟ ಸಚಿವರ ಉಪ ಸಮಿತಿಯನ್ನು ರಚಿಸಲಾಗಿದೆ. 30 ದಿನಗಳಲ್ಲಿ ತಿಂಗಳಿಗೆ 1,500 ರೂ. ನೀಡಲಾಗುವುದು ಎಂದು ಹೇಳಿದ್ದಾರೆ.