ಲಕ್ಷಗಟ್ಟಲೆ ಹಣ ಸಂಪಾದನೆ ಮಾಡೋರು ಅಂದಾಗ ನಮಗೆ ನೆನಪಾಗೋದು ಐಟಿ ಉದ್ಯಮಿಗಳು. ಆದ್ರೆ ಇಲ್ಲೊಬ್ಬ ಮಹಿಳೆ ದಿನಕ್ಕೆ 10 ಸಾವಿರ ರೂಪಾಯಿಯಂತೆ ತಿಂಗಳಿಗೆ 3 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾಳೆ. ಆಕೆ ಸಾಫ್ಟ್ ವೇರ್ ಉದ್ಯಮಿ ಅಲ್ಲ. ಬೀದಿ ಬದಿಯಲ್ಲಿ ದೋಸೆ ಮಾರಾಟ ಮಾಡುವ ಮಹಿಳೆ.
ಹೌದು, ಆಂಧ್ರಪ್ರದೇಶದ ಕುಟಗುಲ್ಲದ ನರಸಮ್ಮ ದೋಸೆ ಮಾರಾಟ ಮಾಡಿಯೇ ಇಷ್ಟೊಂದು ಆದಾಯ ಗಳಿಸುತ್ತಿದ್ದಾರೆ. ನರಸಮ್ಮ ಒಂದು ದಶಕದಿಂದ ದೋಸೆ ತಯಾರಿಸುತ್ತಿದ್ದಾರೆ. ಕದಿರಿನಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಕುಟಗುಲ್ಲಾದಲ್ಲಿ ದೋಸೆ ಮಾರಾಟ ಮಾಡುತ್ತಾರೆ. ಸಣ್ಣ ಗೂಡಂಗಡಿಯಲ್ಲಿ ದೋಸೆ ಮಾರಾಟ ಮಾಡುವ ನರಸಮ್ಮನಿಗೆ ಕುಟುಂಬಸ್ಥರು ಸಹಾಯ ಮಾಡುತ್ತಾರೆ.
ಅಕ್ಕಿ ಹಾಗೂ ಉದ್ದನ್ನು ನೆನೆಹಾಕಿ ಅದನ್ನು ರುಬ್ಬಿ, ಮರುದಿನ ದೋಸೆ ತಯಾರಿಸುತ್ತಾರೆ ನರಸಮ್ಮ. ಅವರ ಎಗ್ ದೋಸೆಗೆ ಹೆಚ್ಚಿನ ಬೇಡಿಕೆ ಇದೆ. ಒಂದು ಎಗ್ ದೋಸೆ ಬೆಲೆ 30 ರೂಪಾಯಿ. ಪ್ಲೇನ್ ದೋಸೆ ಹತ್ತು ರೂಪಾಯಿ ಆದ್ರೆ ಮಸಾಲೆ ದೋಸೆ 20 ರೂಪಾಯಿ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೆ ದೋಸೆ ಮಾರಾಟ ನಡೆಯುತ್ತಾರೆ. ಕಾರ್ಮಿಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಇಲ್ಲಿಗೆ ಹೆಚ್ಚಾಗಿ ಬರ್ತಾರೆ. ನರಸಮ್ಮ ಚಟ್ನಿ, ಸಾಂಬಾರ್ ಮತ್ತು ದಾಲ್ ನೀಡ್ತಾರೆ. ದೋಸೆ ಘಮ ಎಲ್ಲರನ್ನು ಸೆಳೆಯುತ್ತದೆ. ಅವರ ಪ್ರಮಾಣಿಕ ಕೆಲಸ, ಸ್ವಚ್ಛತೆ ಹಾಗೂ ಟೇಸ್ಟ್ ಅವರ ವ್ಯಾಪಾರವನ್ನು ವೃದ್ಧಿಸಿದೆ.