ಈ ವರ್ಷ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ತೀರದಲ್ಲಿ 6.37 ಲಕ್ಷ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕ ಗೂಡುಕಟ್ಟಲು ಆಗಮಿಸಿದ್ದು, ಹಿಂದಿನ 5.5 ಲಕ್ಷ ದಾಖಲೆಯನ್ನು ಮುರಿದಿವೆ.
ಬೆರ್ಹಾಂಪುರ ವಿಭಾಗೀಯ ಅರಣ್ಯಾಧಿಕಾರಿ ಸನ್ನಿ ಖೋಕ್ಕರ್ ಈ ಮಾಹಿತಿಯನ್ನು ನೀಡಿದ್ದಾರೆ. ಪೊದಂಪೆಟ್ಟಾ ಪ್ರದೇಶ ಸಮೀಪದಲ್ಲಿ ಮೊಟ್ಟೆ ಇಡಲು ಆಮೆಗಳು ಆಗಮಿಸಿವೆ. ಫೆಬ್ರವರಿ 23 ರಿಂದ ಮಾರ್ಚ್ 2 ರವರೆಗೆ 6.37 ಲಕ್ಷ ಆಮೆಗಳು ಆಗಮಿಸಿವೆ ಎಂದು ಅವರು ಹೇಳಿದ್ದಾರೆ.
ಈ ವರ್ಷ, ಚಂಡಮಾರುತಗಳು ಮತ್ತು ಭಾರೀ ಮಳೆಯಂತಹ ಹವಾಮಾನ ವೈಪರೀತ್ಯಗಳು ಈ ಭಾಗದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಕಡಲತೀರಗಳು ಬಾಧಿತವಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ವಿಭಾಗವು ಅರಣ್ಯಾಧಿಕಾರಿಗಳನ್ನು ನಿಯೋಜಿಸುವ ಮೂಲಕ ಆಮೆಗಳ ಮರಣವನ್ನು ತಡೆಗಟ್ಟಲು ತನ್ನ ಮೇಲ್ವಿಚಾರಣೆಯನ್ನು ಹೆಚ್ಚಿಸಿದೆ.