ಭಾರತೀಯ ರೈಲ್ವೆ ಇಲಾಖೆ ಇದಾಗಲೇ ಹಲವಾರು ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಸ್ಸಾಂನ ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಸಂಪೂರ್ಣ ಲೈಂಗಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಟೀ ಸ್ಟಾಲ್ ಸ್ಥಾಪಿಸಿದ್ದು ಇದು ಭಾರಿ ಶ್ಲಾಘನೆಗೆ ಕಾರಣವಾಗಿದೆ.
ಸಮಾಜದಿಂದ ತಿರಸ್ಕರಿಸಲ್ಪಟ್ಟ ತೃತೀಯಲಿಂಗಿಗಳ ಬದುಕನ್ನು ಕಟ್ಟಿಕೊಡುವಲ್ಲಿ ರೈಲ್ವೆ ಹೊಸ ಹೆಗ್ಗರುತು ಮೂಡಿಸಿದೆ. ಇಂಥದ್ದೊಂದು ಯೋಜನೆ ದೇಶದಲ್ಲಿಯೇ ಮೊದಲನೆಯ ಬಾರಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣ ದೃಷ್ಟಿಯಿಂದ ರೈಲ್ವೆ ನಿಲ್ದಾಣದಲ್ಲಿ “ಟ್ರಾನ್ಸ್ ಟೀ ಸ್ಟಾಲ್’ ಸ್ಥಾಪನೆಗೆ ಈಶಾನ್ಯ ರೈಲ್ವೆ ಚಿಂತನೆ ನಡೆಸಿತ್ತು. ಇದೀಗ ಅದು ಕಾರ್ಯಗತವಾಗಿದೆ. ಆಲ್ ಅಸ್ಸಾಂ ಟ್ರಾನ್ಸ್ಜೆಂಡರ್ ಅಸೋಸಿಯೇಷನ್ ಕೂಡ ಈ ಪ್ರಯತ್ನಕ್ಕೆ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲ್ವೆ ನಿಲ್ದಾಣಗಳಲ್ಲೂ “ಟ್ರಾನ್ಸ್ ಟೀ ಸ್ಟಾಲ್’ ತೆರೆಯಲಿದ್ದೇವೆ ಎಂದು ಈಶಾನ್ಯ ರೈಲ್ವೆ ವಕ್ತಾರ ಸವ್ಯಸಾಚಿ ದೇ ತಿಳಿಸಿದ್ದಾರೆ.