ವಾರಣಸಿ: ಕಾಶಿಯ ಕೊತ್ವಾಲ್ ಎಂದೇ ಕರೆಸಿಕೊಳ್ಳುವ ಬಾಬಾ ಕಾಲಭೈರವನಿಗೆ ಇದೇ ಮೊತ್ತ ಮೊದಲ ಬಾರಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ.
ಕಾಲಭೈರವನ ತಲೆಯ ಮೇಲೆ ಪೊಲೀಸ್ ಕ್ಯಾಪ್, ಎದೆಯ ಮೇಲೆ ಬ್ಯಾಡ್ಜ್, ಎಡಗೈಯಲ್ಲಿ ಬೆಳ್ಳಿಯ ರಾಡ್ ಮತ್ತು ಬಲಗೈಯಲ್ಲಿ ರಿಜಿಸ್ಟರ್ ಅನ್ನು ಹಾಕಲಾಗಿದ್ದು, ಭೈರವ ಹೊಸ ರೂಪವನ್ನು ತಾಳಿದ್ದ. ಕಾಲಭೈರವನ ಹೊಸ ರೂಪದ ಸುದ್ದಿ ತಿಳಿಯುತ್ತಲೇ ದೇವಸ್ಥಾನದಲ್ಲಿ ಅಪಾರ ಭಕ್ತರು ನೆರೆದಿದ್ದರು. ಸಾಂಕ್ರಾಮಿಕ ಬಿಕ್ಕಟ್ಟಿನ್ನು ದೇವರು ಪರಿಹರಿಸುತ್ತಾರೆ ಎಂಬುದು ದೇಗುಲಕ್ಕೆ ಹರಿದುಬಂದ ಭಕ್ತರ ನಂಬಿಕೆಯಾಗಿದೆ.
ಇನ್ನು ಇದೇ ಮೊದಲ ಬಾರಿಗೆ ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ ಎಂದು ಬಾಬಾ ಕಾಲಭೈರವ ದೇವಸ್ಥಾನದ ಮಹಂತ್ ಅನಿಲ್ ದುಬೆ ಹೇಳಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದ ದೇಶದ ಜನರನ್ನು ರಕ್ಷಿಸಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಜ್ಯ ಮತ್ತು ದೇಶದಲ್ಲಿ ಸುಖ-ಸಮೃದ್ಧಿ ನೆಲೆಸಲಿ. ಎಲ್ಲರೂ ಆರೋಗ್ಯವಂತರಾಗಿದ್ದು, ಯಾವುದೇ ರೀತಿಯ ತೊಂದರೆಗಳನ್ನು ಎದುರಿಸಬಾರದು ಎಂದು ವಿಶೇಷವಾಗಿ ಪ್ರಾರ್ಥಿಸಲಾಗಿದೆ.
ಕಾಲಭೈರವನು ಹಲವು ರೂಪಗಳನ್ನು ಹೊಂದಿದ್ದು, ಪೊಲೀಸ್ ಅವತಾರದಲ್ಲಿ ಅವನು ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ನೀಡುತ್ತಾನೆ ಎಂಬುದು ಭಕ್ತಗಣದ ನಂಬಿಕೆಯಾಗಿದೆ.