ಭಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಆ ವೇಳೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸಂದರ್ಭ ಅವರ ದೇಹದಲ್ಲಿ ಮದ್ಯ ಹಾಗೂ ಕೊಕೇಯ್ನ್ ಅಂಶಗಳು ಕಂಡು ಬಂದಿವೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಕಾದಿರ್ ತಿಳಿಸಿದ್ದಾರೆ.
ಇಮ್ರಾನ್ ಖಾನ್ರ ಮೂತ್ರವನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಅವರ ದೇಹದಲ್ಲಿ ’ಮದ್ಯ ಹಾಗೂ ಕೊಕೇಯ್ನ್ನಂಥ’ ವಿಷಪೂರಿತ ರಾಸಾಯನಿಕಗಳು ಇರುವುದು ಕಂಡು ಬಂದಿದೆ ಎಂದು ʼಡಾನ್ʼ ದೈನಿಕ ವರದಿ ಮಾಡಿತ್ತು.
ತಮ್ಮ ಪಾಲಿಗೆ ಕಂಟಕಪ್ರಾಯವಾಗಿರುವ ಅಲ್-ಕದೀರ್ ಟ್ರಸ್ಟ್ ಪ್ರಕರಣದೊಂದಿಗೆ ಅದಾಗಲೇ 100ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಈ ವಿಚಾರವಾಗಿ ಮತ್ತೊಮ್ಮೆ ಕಾನೂನು ಕ್ರಮ ಎದುರಿಸಬೇಕಾದ ಸಾಧ್ಯತೆ ಇದೆ.
ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ನ್ಯಾಯಾಂಗ ತನಿಖೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ರೇಂಜರ್ಸ್ರಿಂದ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತಮ್ಮ ವಿರುದ್ಧದ ಮಿಕ್ಕೆಲ್ಲಾ ಪ್ರಕರಣಗಳ ಸಂಬಂಧ ಬಂಧನದಿಂದ ರಕ್ಷಣೆ ನೀಡುವ ಜಾಮೀನನ್ನು ಸಹ ಪಡೆದಿದ್ದಾರೆ ಇಮ್ರಾನ್.
ಇಮ್ರಾನ್ ಖಾನ್ ಬಂಧನದಿಂದ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ದಂಗೆಗಳಾಗಿದ್ದು, ಸೇನಾ ಸಂಸ್ಥೆಗಳ ಮೇಲೆ ಇಮ್ರಾನ್ ಬೆಂಬಲಿಗರಿಂದ ಅಲ್ಲಲ್ಲಿ ದಾಳಿಗಳಾಗಿವೆ.
ಇಮ್ರಾನ್ ಖಾನ್ ಮಾಜಿ ಪತ್ನಿ ಸಹ ಈ ಕುರಿತು ಆಪಾದನೆ ಮಾಡಿದ್ದು, “ಸಾಮಾನ್ಯವಾಗಿ ಆತ ಅರ್ಧದಷ್ಟು ಉದ್ದೀಪನಾ ಮಾತ್ರೆ ಮತ್ತು ಒಂದು ಅಥವಾ ಎರಡು ಲಂಪ್ ಕೋಕ್, ಹಾಗೂ ರಾತ್ರಿ ವೇಳೆ ಎರಡು ನಿದ್ರಾಜನಕಗಳನ್ನು ಸೇವಿಸುತ್ತಿದ್ದರು,” ಎಂದು ಹೇಳಿಕೊಂಡಿದ್ದರು.