ಸಾಲು ಸಾಲು ಹಬ್ಬಗಳ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯವು ಸೆಪ್ಟೆಂಬರ್ 30ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಹೊರಡಿಸಿದ್ದು ಯಾವುದೇ ರೀತಿಯ ಔತಣ ಕೂಟಗಳು ನಡೆಯುವಂತಿಲ್ಲ ಎಂದು ಹೇಳಿದೆ.
ಪ್ರತಿಯೊಂದು ರಾಜ್ಯಗಳಿಗೆ ಕೊರೊನಾ ವಿರುದ್ಧ ಟೆಸ್ಟ್, ಟ್ರ್ಯಾಕ್, ಚಿಕಿತ್ಸೆ ಹಾಗೂ ಲಸಿಕೆ ಎಂಬ ಐದು ಅಸ್ತ್ರಗಳನ್ನು ಬಳಸುವಂತೆ ಹೇಳಿದೆ.
ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅದ್ದೂರಿ ಹಬ್ಬದಾಚರಣೆಗಳಿಗೆ ಬ್ರೇಕ್ ಹಾಕಿದೆ.
ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದಲ್ಲಿ ಪ್ರಸ್ತುತ ಕೊರೊನಾ ಪರಿಸ್ಥಿತಿಯು ಹತೋಟಿಗೆ ಬಂದಿದೆ. ಆದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಯು ಕಳವಳಕಾರಿಯಾಗಿದೆ ಎಂದು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿ ಯಾವುದೇ ಕಾರಣಕ್ಕೂ ಸೋಂಕು ಹೆಚ್ಚಾದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು. ಸೋಂಕು ಏರಿಕೆಯ ಮುನ್ಸೂಚನೆಯನ್ನು ಮೊದಲೇ ಗೊತ್ತುಪಡಿಸಿಕೊಂಡು ಅದನ್ನು ಹರಡದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಆಯಾ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದೆ.