ಬೆಂಗಳೂರು: ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು, ಭಾಷಾ ಕೌಶಲ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ 100 ದಿನಗಳ ಓದುವ ಆಂದೋಲನ ಕೈಗೊಳ್ಳುವಂತೆ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದಾದ್ಯಂತ ವ್ಯಾಸಂಗ ಮಾಡುತ್ತಿರುವ ಬಾಲವಾಟಿಕ, ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 100 ದಿನಗಳ ಓದುವ ಆಂದೋಲನ ಕಾರ್ಯಕ್ರಮ ನಡೆಸುವಂತೆ ತಿಳಿಸಲಾಗಿದೆ. ಮಕ್ಕಳಲ್ಲಿ ಓದುವುದು, ಬರೆಯುವುದು, ಅರ್ಥೈಸಿಕೊಳ್ಳುವುದು, ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಿದ್ದು, ಈ ನಿಟ್ಟಿನಲ್ಲಿ ಓದುವ ಆಂದೋಲನ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ.
ಬಾಲವಾಟಿಕದಿಂದ ಎರಡನೇ ತರಗತಿ, ಮೂರರಿಂದ ಐದನೇ ತರಗತಿ ಮತ್ತು ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡಿ ನವೆಂಬರ್ 15ರಿಂದ 2024ರ ಫೆಬ್ರವರಿ 22ರ ವರೆಗೆ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ.