ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಮಿತಿ ರಚಿಸುವ ಕುರಿತಾಗಿ ಇಂದು ಮಹತ್ವದ ಸಭೆ ನಡೆಯಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ ಸಭೆ ನಡೆಸಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಭೆ ಕರೆದಿದ್ದು, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ಶೋಷಣೆಯ ಕುರಿತಾಗಿ ಚರ್ಚೆ ನಡೆಸಲಾಗುವುದು. ಇದುವರೆಗೆ ಮಂಡಳಿಗೆ ಲೈಂಗಿಕ ಶೋಷಣೆ ಕುರಿತು ಯಾವುದೇ ರೂಪದಲ್ಲಿ ದೂರುಗಳು ಬಂದಿಲ್ಲ. ದೂರು ಬಂದಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇಂದಿನ ಸಭೆಗೆ ಎಲ್ಲರಿಗೂ ಆಹ್ವಾನ ಕಳುಹಿಸಲಾಗಿದೆ. ಮಹಿಳಾ ಆಯೋಗದ ಅಧ್ಯಕ್ಷರು, ಉದ್ಯಮದ ಗಣ್ಯರು, ನೂರಕ್ಕೂ ಅಧಿಕ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಕೇರಳದ ಹೇಮಾ ಸಮಿತಿ ಮಾದರಿ ಸಮಿತಿ ರಚನೆ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.