alex Certify ಅರಣ್ಯ ಇಲಾಖೆಯಿಂದ ಮಹತ್ವದ ಕ್ರಮ: ಮಾನವ- ಪ್ರಾಣಿಗಳ ಸಂಘರ್ಷ ತಗ್ಗಿಸಿದ ನೀರಿನ ತೊಟ್ಟಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯ ಇಲಾಖೆಯಿಂದ ಮಹತ್ವದ ಕ್ರಮ: ಮಾನವ- ಪ್ರಾಣಿಗಳ ಸಂಘರ್ಷ ತಗ್ಗಿಸಿದ ನೀರಿನ ತೊಟ್ಟಿಗಳು

ಬಳ್ಳಾರಿ: ಈ ವರ್ಷ ಸುದೀರ್ಘ ಬೇಸಿಗೆಯ ಅವಧಿಯಲ್ಲಿ ಸಂಡೂರು ತಾಲೂಕಿನ ಎರಡೂ ವಲಯಗಳಲ್ಲಿ ನೀರಿನ ಕೊರತೆ ನೀಗಿಸಲು ಅರಣ್ಯ ಇಲಾಖೆಯು ಇಡೀ ತಾಲೂಕಿನ ಎಲ್ಲಾ ಕಾಡುಗಳ ಆಯಕಟ್ಟಿನ ಸ್ಥಳಗಳಲ್ಲಿ ವಿಶಾಲವಾದ ನೀರು ತೊಟ್ಟಿಗಳನ್ನು ನಿರ್ಮಿಸಿ ಕಾಲಕಾಲಕ್ಕೆ ನೀರು ತುಂಬಿಸಿದ್ದರಿಂದ ಮೊದಲ ಬಾರಿಗೆ ತಾಲೂಕಿನಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲಾಗಿದೆ.

ಸಂಡೂರಿನ ಕಾಡುಗಳಲ್ಲಿ ಚಿರತೆ, ಕರಡಿ, ಕೊಂಡುಕುರಿ, ಕಾಡುಹಂದಿ, ಮುಳ್ಳುಹಂದಿ, ತಾಳೆ ಪುನುಗು, ಚುಕ್ಕೆ ಪುನುಗು, ಕೆಂಪು ಮೂತಿಯ ಮಂಗ, ಕೋಡುಗ, ಮುಂಗುಸಿ ಮುಂತಾದ ಸಸ್ತನಿಗಳು, ವಿವಿಧ ಸರೀಸೃಪಗಳು ಹಾಗೂ ಅಪಾರ ಸಂಖ್ಯೆಯ ಹಕ್ಕಿಗಳಿದ್ದು, ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚು ಇದ್ದು, ಕಾಡಿನಲ್ಲಿರುವ ಕೆರೆ ಕಟ್ಟೆಗಳು, ಚೆಕ್‍ಡ್ಯಾಂಗಳಲ್ಲಿ ನೀರು ಬತ್ತಿಹೋದ ನಂತರ ಪ್ರಾಣಿ-ಪಕ್ಷಿಗಳು ನೀರನ್ನು ಹರಸಿ ಕೃಷಿಭೂಮಿ ಹಾಗೂ ಜನ ವಸತಿ ಪ್ರದೇಶದ ಕಡೆಗೆ ಬಂದಾದ ಮನುಷ್ಯನ ಮೇಲೆ ಉದ್ದೇಶ ಪೂರ್ವಕವಲ್ಲದ ದಾಳಿ ನಡೆಯುವ ಸಾಧ್ಯತೆ ತಪ್ಪಿಸಲು ಅರಣ್ಯ ಇಲಾಖೆ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ.

ಅಲ್ಲದೇ ಇಂತಹ ಸಂದರ್ಭದಲ್ಲಿ ಕಂಗೆಟ್ಟ ಪ್ರಾಣಿಗಳ ಮೇಲೆ ಜನರು ಆಕ್ರಮಣ ಮಾಡಿ ಅವುಗಳನ್ನು ಕೊಲ್ಲುವ ಸಾಧ್ಯತೆಯೂ ಇರುತ್ತದೆ. ಈ ಪರಿಸ್ಥಿತಿಯನ್ನು ಮುಂದಾಲೋಚಿಸಿದ ಅರಣ್ಯ ಇಲಾಖೆಯು ಸಂಡೂರು ತಾಲೂಕಿನ ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಅನೇಕ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಿದೆ. ಇದರಿಂದಾಗಿ ಎಲ್ಲಾ ಪ್ರಾಣಿಗಳು ತೊಟ್ಟಿಗಳ ನೀರನ್ನು ಕುಡಿದು ಕಾಡಿನಲ್ಲಿಯೇ ಉಳಿಯಲು ಸಾಧ್ಯವಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.

ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಅವರು, ನೀರಿನ ತೊಟ್ಟಿಗಳ ಹಾಗೂ ಸುತ್ತಮುತ್ತ ಕಾಡು ಪ್ರಾಣಿಗಳ ಚಲನವಲನ ಅಧ್ಯಯನಿಸಿ ಆಯ್ದ ನೀರಿನ ತೊಟ್ಟಿಗಳ ಸುತ್ತಮುತ್ತ ಸುಮಾರು 30 ಕ್ಯಾಮೆರಾ ಟ್ರಾಪ್‍ಗಳನ್ನು ಕಟ್ಟಿ ಅಲ್ಲಿಗೆ ಬರುವ ಪ್ರಾಣಿಗಳನ್ನು ದಾಖಲಿಸಿದ್ದಾರೆ. ಗಣಿ ಪ್ರದೇಶದ ಸುತ್ತಲೂ ಸಹ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಎಲ್ಲಾ ವನ್ಯಜೀವಿಗಳ ಸಂಚರಿಸಿ ಈ ತೊಟ್ಟಿಗಳ ನೀರನ್ನು ಕುಡಿಯುವುದನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುವುದು. ಅಲ್ಲದೇ ವನ್ಯಜೀವಿಗಳು ಸೇವಿಸುವ ಸ್ಥಳೀಯ ಹಣ್ಣಿನ ಮರಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಸಿ, ಅರಣ್ಯದ ಜೀವ ವೈವಿಧ್ಯತೆಯನ್ನು ಹೆಚ್ಚಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ಹೇಳಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಂಡೂರು ದಕ್ಷಿಣ ವಲಯ ಆಯಕಟ್ಟಿನ ಸ್ಥಳದಲ್ಲಿ ಹೊಸದಾಗಿ 35 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಕಳೆದ 5 ತಿಂಗಳಿಂದ ಅವುಗಳಲ್ಲಿ ಕಾಲಕಾಲಕ್ಕೆ ನೀರನ್ನು ತುಂಬಿಸಲಾಗುತ್ತಿದೆ. ಇದರಿಂದ ನಮ್ಮ ವಲಯದಲ್ಲಿ ಮಾನವ ವನ್ಯಜೀವಿ ಸಂಘರ್ಷ ಕಡಿಮೆಯಾಗಿದೆ ಎಂದು ಸಂಡೂರು ದಕ್ಷಿಣ ವಲಯ ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್ ಹೇಳಿದ್ದಾರೆ.

ಸಂಡೂರು ಉತ್ತರ ವಲಯದಲ್ಲಿ ಈ ವರ್ಷ 15 ನೀರಿನ ತೊಟ್ಟಿಗಳನ್ನು ಕಾಡಿನ ಮಧ್ಯೆ ನಿರ್ಮಿಸಲಾಗಿದ್ದು, ಎಲ್ಲಾ ನೀರಿನ ತೊಟ್ಟಿಗಳಿಗೆ ಕರಡಿ, ಚಿರತೆ, ಕೊಂಡು ಕುರಿ, ವಾನರಗಳು, ಹಕ್ಕಿಗಳು ಭೇಟಿ ನೀಡಿ ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿರುವುದು ತುಂಬಾ ಹರ್ಷದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಕಾಲ ಕಾಲಕ್ಕೆ ನೀರು ತುಂಬಿಸಲಾಗುವುದು ಎಂದು ಸಂಡೂರು ಉತ್ತರ ವಲಯ ವಲಯ ಅರಣ್ಯಾಧಿಕಾರಿ- ಸಯ್ಯದ್ ದಾದಾ ಖಲಂದರ್ ಹೇಳಿದ್ದಾರೆ.

ನೀರಿನ ತೊಟ್ಟಿಗಳ ಸುತ್ತಮುತ್ತ ಕ್ಯಾಮರಾ ಟ್ರಾಪ್‍ಗಳನ್ನು ಕಟ್ಟಿ ಅಲ್ಲಿಗೆ ಬರುವ ವನ್ಯಜೀವಿಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಅತ್ಯಂತ ಅಪರೂಪವಾದ, ಸಾಮಾನ್ಯವಾಗಿ ಕಾಣದ ಹಾಗೂ ಅತಿ ಚುರುಕಿನ ಕೊಂಡುಕುರಿ(ಫೋರ್-ಹಾರ್ನ್ ಆಂಟಿಲೋಪ್)ಗಳು ಅಪಾರ ಸಂಖ್ಯೆಯಲ್ಲಿ ನೀರಿನ ತೊಟ್ಟಿಗಳಿಗೆ ಭೇಟಿ ನೀಡುತ್ತಿವೆ. ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ತನಿಯನ್ನು ಸಂರಕ್ಷಿಸಲು ಹೆಚ್ಚಿನ ಅಧ್ಯಯನ ಮಾಡಲಾಗುತ್ತಿದೆ. ಕಾಡಿನೆಲ್ಲೆಡೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ವನ್ಯಜೀವಿಗಳಿಗೆ ಮರುಜೀವ ನೀಡಿದ ಅರಣ್ಯ ಇಲಾಖೆಗೆ ಧನ್ಯವಾದಗಳು ಎಂದು  ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...