ನವದೆಹಲಿ: ಎಂಬಿಬಿಎಸ್ ಪಾಸ್ ಅಂಕಗಳನ್ನು ಶೇಕಡಾ 40 ರಷ್ಟು ಕಡಿಮೆ ಮಾಡುವ ಮಾರ್ಗಸೂಚಿಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಶುಕ್ರವಾರ ಹಿಂತೆಗೆದುಕೊಂಡಿದೆ.
ಎಂಬಿಬಿಎಸ್ ಪಾಸ್ ಅಂಕಗಳ ಕಟ್ ಆಫ್ ಅನ್ನು ಶೇಕಡಾ 40 ಕ್ಕೆ ಇಳಿಸಲು ಸಾಧ್ಯವಿಲ್ಲ ಎಂದು ಎನ್ ಎಂಸಿ ಹೇಳಿದೆ. ವಿಷಯವನ್ನು ಕೂಲಂಕಷವಾಗಿ ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಇದಕ್ಕೂ ಮುನ್ನ ಸೆಪ್ಟೆಂಬರ್ನಲ್ಲಿ ಆಯೋಗವು ಎರಡು ಪತ್ರಿಕೆಗಳ ಎಂಬಿಬಿಎಸ್ ವಿಷಯಗಳ ಉತ್ತೀರ್ಣ ಅಂಕಗಳನ್ನು ಶೇಕಡಾ 40 ಕ್ಕೆ ಇಳಿಸಿತ್ತು. ವಿಶ್ವವಿದ್ಯಾಲಯವು ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣ ಅಂಕಗಳಿಗೆ ಸಂಬಂಧಿಸಿದಂತೆ ಆಯೋಗವು ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ (ಸಿಬಿಎಂಇ) ಪಠ್ಯಕ್ರಮ ಮಾರ್ಗಸೂಚಿಗಳನ್ನು ಪರಿಷ್ಕರಿಸಿತ್ತು. ಪರಿಷ್ಕೃತ ಸಿಬಿಎಂಇ ಮಾರ್ಗಸೂಚಿಗಳನ್ನು ಆಯೋಗವು ಸೆಪ್ಟೆಂಬರ್ 1 ರಂದು ಹೊರಡಿಸಿದೆ.
“ಎರಡು ಪತ್ರಿಕೆಗಳನ್ನು ಹೊಂದಿರುವ ವಿಷಯಗಳಲ್ಲಿ, ಅಭ್ಯರ್ಥಿಗಳು ಈ ವಿಷಯದಲ್ಲಿ ಉತ್ತೀರ್ಣರಾಗಲು ಒಟ್ಟು (ಎರಡೂ ಪತ್ರಿಕೆಗಳು ಒಟ್ಟಾಗಿ) ಕನಿಷ್ಠ 40 ಶೇಕಡಾ ಅಂಕಗಳನ್ನು ಗಳಿಸಬೇಕಾಗುತ್ತದೆ” ಎಂದು ಎನ್ಎಂಸಿ ಹೇಳಿದೆ.