ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸಿರುವ ಇ-ಶ್ರಮ್ ಪೋರ್ಟಲ್‍ನಲ್ಲಿ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರು ಇದೇ ಡಿಸೆಂಬರ್ 25ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
ಕೇಂದ್ರ ಸರ್ಕಾರವು ಸುಮಾರು 379 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್‍ನಲ್ಲಿ ಅಳವಡಿಸುವಂತೆ ತಿಳಿಸಲಾಗಿರುತ್ತದೆ. ಈ 379 ವರ್ಗಗಳ ಪೈಕಿ ನೇಕಾರರನ್ನು ಸಹ ಇ-ಶ್ರಮ್ ಪೋರ್ಟಲ್‍ನಲ್ಲಿ ನೊಂದಾಯಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ.
ಈ ನೋಂದಣಿಯ ಉದ್ದೇಶವು ನೇಕಾರರಿಗೆ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ನೇಕಾರ, ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲು, ಮರಣ ಹೊಂದಿದಲ್ಲಿ ಪರಿಹಾರ, ಸಹಾಯಧನ ನೀಡಲು ಅನುಕೂಲವಾಗುವ ದೃಷ್ಠಿಯಿಂದ ನೇಕಾರರನ್ನು ಇ-ಶ್ರಮ್ ಪೋರ್ಟಲ್‍ನಲ್ಲಿ ಅಳವಡಿಸುವುದು ಅವಶ್ಯಕತೆ ಇರುತ್ತದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 16 ರಿಂದ 59 ವಯಸ್ಸಿನ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರು ಇ-ಶ್ರಮ್ ಪೋರ್ಟಲ್‍ನಲ್ಲಿ ನೋಂದಾಯಿಸಲು ಅರ್ಹರಿರುತ್ತಾರೆ. ಆದ್ದರಿಂದ ಅರ್ಹ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರು ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು, ಅಂಚೆ ಕಚೇರಿಗಳು, ಕರ್ನಾಟಕ-1, ಬೆಂಗಳೂರು-1 ಹಾಗೂ ಗ್ರಾಮ-1 ಗಳಿಗೆ ಭೇಟಿ ನೀಡಿ ಡಿಸೆಂಬರ್ 25ರೊಳಗಾಗಿ ನೋಂದಣಿ ಮಾಡಿಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-221426ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ತಿಳಿಸಿದ್ದಾರೆ.