ಡಿಜಿಟಲ್ ಡೆಸ್ಕ್ : ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರ ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಜೂ.22 ರಿಂದ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ.
*ಮೊಬೈಲ್ ಅಪ್ಲಿಕೇಷನ್ ಪಡೆಯಲು ಅನುಸರಿಸಬೇಕಾದ ಅಂಶಗಳು
ರೈತರು ತಮ್ಮ ಮೊಬೈಲ್ನಲ್ಲಿ ಗೂಗಲ್ ಪ್ಲೇಸ್ಟೋರ್ನಿಂದ ಬೆಳೆ ಸಮೀಕ್ಷೆ ಮುಂಗಾರು ಹಂಗಾಮಿನ “ಕ್ರಾಪ್ ಸರ್ವೇ ಖಾರಿಫ್ 2024” (Crop Survey Kharif 2024) ಆಪ್ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಆಪ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.ಜಿಲ್ಲೆಯಲ್ಲಿ 3,80,888 ಬೆಳೆ ತಾಕುಗಳಿದ್ದು, ಆ ತಾಕುಗಳಿಗೆ ರೈತರು ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕು.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಕೃಷಿ, ತೋಟಗಾರಿಕೆ, ಪಿ.ಆರ್ ಅಥವಾ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.