ಬಳ್ಳಾರಿ : ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಘಟಕ ನಿರ್ಮಾಣ ಹಾಗೂ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಪಂ ತೋಟಗಾರಿಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರೆಂಗಲ್ ತಿಳಿಸಿದ್ದಾರೆ.
ಕೆಎಂಇಆರ್‍ಸಿಯ ಸಿಇಪಿಎಂಐಜೆಡ್ ಯೋಜನೆಯಡಿ ಈರುಳ್ಳಿ ಶೇಖರಣಾ ಘಟಕಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಜಿಲ್ಲೆಯ ಬಳ್ಳಾರಿ, ಕುರುಗೋಡು, ಕಂಪ್ಲಿ ತಾಲ್ಲೂಕಿನಲ್ಲಿ ಮೆಗಾ ಮೈಕ್ರೋ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವೈವಿಧ್ಯಮಯ ಬೆಳೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಿಸುವುದು ಮತ್ತು ಮಣ್ಣಿನ ಆರೋಗ್ಯ ಉತ್ತಮ ಪಡಿಸುವುದು ಹಾಗೂ ಸಾವಯವ ಗೊಬ್ಬರ ಬಳಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಮುಖ್ಯ ಘಟಕಗಳು
ಬಹುವಾರ್ಷಿಕ ತೋಟಗಾರಿಕೆ ಬೆಳೆ ಬೆಳೆಯುವುದು(ಮಾವು, ಸೀಬೆ, ನೇರಳೆ, ಗೇರು, ಸಿತಾಫಲ, ಗುಲಾಬಿ, ನುಗ್ಗೆ), ಅರಣ್ಯ ಬೆಳೆಯನ್ನು ಬೆಳೆಯುವುದು (ಸಾಗುವಾನಿ, ಮಹಾಗನಿ, ಚಂದನ ), ಬಯೋಡೈಜೆಸ್ಟರ್ ಅಳವಡಿಸಿಕೊಳ್ಳುವುದು (ಅಳತೆ: 10ಘಿ4ಘಿ4 ಅಡಿ), ಕೃಷಿಹೊಂಡ ನಿರ್ಮಿಸಿಕೊಳ್ಳುವುದು (ಐಚ್ಚಿಕವಾಗಿರುತ್ತದೆ)
*ಅರ್ಹತೆ:*
ರೈತರು ಕನಿಷ್ಟ 1 ಎಕರೆಯಿಂದ 2.5 ಎಕರೆ ವರೆಗೆ ಬಹುವಾರ್ಷಿಕ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿರಬೇಕು. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಶೇ.50ರಂತೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.75ರಂತೆ ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ನಿಗದಿತ ಆರ್ಜಿ ನಮೂನೆಯಲ್ಲಿ ಪಹಣಿ, ಆಧಾರ್‍ಚೀಟಿ ಹಾಗೂ ಬ್ಯಾಂಕ್ ಪಾಸ್‍ಬುಕ್‍ನೊಂದಿಗೆ ಬಳ್ಳಾರಿ, ಕುರುಗೋಡು, ಕಂಪ್ಲಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.